×
Ad

ಬೆಂಗಳೂರು: 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ; ಮಹಿಳೆ ಸೇರಿ 5 ಮಂದಿ ಬಂಧನ

Update: 2022-09-13 18:10 IST

ಬೆಂಗಳೂರು, ಸೆ.13: ರೈಲಿನ ಮೂಲಕ ಗಾಂಜಾ ಕಳ್ಳ ಸಾಗಾಣೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿ 5 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣ ಸಂಬಂಧ ಮಹಿಳೆ ಸೇರಿ ಐವರು ಆರೋಪಿಗಳನ್ನು ಕೆಂಪೇಗೌಡ ನಗರ ಠಾಣಾ ಪೊಲೀಸರು ಬಂಧಿಸಿ 2 ಕೋಟಿ ಮೌಲ್ಯದ 506 ಕೆಜಿ ಗಾಂಜಾ ವಶಪಡಿಸಿಕೊಂಡರೆ, ಜಯನಗರ ಪೊಲೀಸರು 3 ಕೋಟಿ ರೂ.ಮೌಲ್ಯದ 50 ಕೆಜಿ ಗಾಂಜಾ, 6 ಕೆಜಿ ಆಶಿಶ್ ಆಯಿಲ್‍ನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ತಿಳಿಸಿದ್ದಾರೆ.

ಕೆಂಪೇಗೌಡ ನಗರ ಪೊಲೀಸರು ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನವಾಝ್, ನೂರ್ ಅಹ್ಮದ್, ಮುಬಾರಕಾ, ಇಮ್ರಾನ್‍ಪಾಷಾ, ಕಿರಣ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಮುಬಾರಕಾ ಎಂಬಾಕೆ ಅಗ್ರಹಾರದ ಕೆಂಪಾಂಬುದಿ ಕೆರೆಯ ನಾರ್ಥ್ ಗೇಟ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಕೆಂಪೇಗೌಡ ನಗರ ಪೊಲೀಸರು ಆಕೆಯನ್ನು ಬಂಧಿಸಿ 66 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಆನಂತರ, ಆಕೆಯನ್ನು ತೀವ್ರ ವಿಚಾರಣೆ ನಡೆಸಿದಾಗ ಕೆಂಗೇರಿಯ ಮನೆಯೊಂದರಲ್ಲಿ ಗಾಂಜಾ ಶೇಖರಿಸಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ದಾಳಿ ನಡೆಸಿ ಅಲ್ಲಿ ಶೇಖರಿಸಿದ್ದ 440 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ. 

ಬಂಧಿತರು ಭುವನೇಶ್ವರ್ ನಿಂದ ರೈಲಿನ ಮೂಲಕ ನಗರಕ್ಕೆ ಕಳ್ಳತನದ ಮೂಲಕ ಗಾಂಜಾ ಸರಬರಾಜು ಮಾಡುತ್ತಿದ್ದರು. 10-20 ಕೆಜಿಯ ಚೀಲಗಳನ್ನು ರೈಲಿನ ಸೀಟಿನಡಿಯಲ್ಲಿಟ್ಟು ಕಳುಹಿಸುತ್ತಿದ್ದರು. ಒರಿಸ್ಸಾ ಮೂಲದ ವ್ಯಕ್ತಿಯೊಬ್ಬನನ್ನು ರೈಲಿನಲ್ಲೇ ಕೂರಿಸಿ ನಿಗಾ ಮಾಡಿಸುತ್ತಿದ್ದರು. ನಂತರ ರೈಲು ಕೆಆರ್ ಪುರಂ ಬಳಿಗೆ ಬರುತ್ತಿದ್ದಂತೆ ಆರೋಪಿಗಳು ಗಾಂಜಾ ಇಳಿಸಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಆಶಿಷ್ ಎಣ್ಣೆ ಮಾರಾಟ: ಜಯನಗರ ಪೊಲೀಸರು ಅಶೀಶ್ ಅಯಿಲ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ನಯಾಝ್, ಸಾಗರ್ ಸಾಹೊ ಹಾಗೂ ಶೇಷಗಿರಿ ಸೇರಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೋಟ್ಯಾಂತರ ಮೌಲ್ಯದ 50 ಕೆಜಿ ಗಾಂಜಾ, 2.80 ಲಕ್ಷ ಮೌಲ್ಯದ 6 ಕೆಜಿ ಆಶಿಶ್ ಆಯಿಲ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್‍ಪಾಟೀಲ್, ಡಿಸಿಪಿ ಕೃಷ್ಣಕಾಂತ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News