ಪ್ರವಾಹ ಪೀಡಿತ ಪ್ರದೇಶದಲ್ಲಿ ಬೋಟ್‍ನಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ: ಸದನದಲ್ಲಿ ಭಾರೀ ಚರ್ಚೆ

Update: 2022-09-13 13:55 GMT

ಬೆಂಗಳೂರು, ಸೆ. 13: ‘ಬೆಂಗಳೂರು ನಗರದ ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೋಟ್‍ನಲ್ಲಿ ಪ್ರಯಾಣ ಮಾಡಿದ್ದು ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಕೆಲಕಾಲ ವಾಗ್ವಾದಕ್ಕೆ ಕಾರಣವಾಯಿತು.

ಮಂಗಳವಾರ ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತು ನಿಯಮ 69 ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಮಳೆ ಹಾನಿ ಪೀಡಿತ ಪ್ರದೇಶ ಮಹದೇವಪುರ ಕ್ಷೇತ್ರಕ್ಕೆ ನಾನು ಖುದ್ದು ಪರಿಶೀಲನೆಗೆ ತೆರಳಿದ್ದೆ. ಅಲ್ಲಿ ಬೋಟ್‍ನಲ್ಲೇ ತಿರುಗಾಡಬೇಕು' ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಅರವಿಂದ ಲಿಂಬಾವಳಿ, ‘ಆ ಬಡಾವಣೆಗೆ ಬೇರೆ ರಸ್ತೆ ಇತ್ತು. ಆದರೆ ನೀವು ಏಕೆ ಬೋಟ್‍ನಲ್ಲಿ ಹೋಗಿದ್ದು? ಎಂದು ಪ್ರಶ್ನಿಸಿದರು. ‘ಆ ಬಡಾವಣೆಗೆ ಬೇರೆ ರಸ್ತೆ ಇತ್ತಾ?' ಎಂದು ಮರುಪ್ರಶ್ನೆ ಹಾಕಿದ ಸಿದ್ದರಾಮಯ್ಯ, ‘ನಾನು ಬರುವುದು ಗೊತ್ತಿದ್ದು ನೀವು ನನ್ನ ಜತೆ ಬಂದಿದ್ದರೆ ಬೇರೆ ರಸ್ತೆಯಲ್ಲಿ ಹೋಗಬಹುದಿತ್ತು' ಎಂದು ತಿರುಗೇಟು ನೀಡಿದರು.

‘ನೀವು ಬರುತ್ತೀರಾ ಎಂದು ನನಗೆ ಮೊದಲೇ ಗೊತ್ತಿದ್ದರೆ ಸ್ವಾಗತ ಮಾಡುತ್ತಿದ್ದೆವು. ನಾವು ಹೋದ ರಸ್ತೆಯಲ್ಲಿ ನೀರು ನಿಂತಿತ್ತು. ನಾಲ್ಕೈದು ಅಡಿಗಳಷ್ಟು ನೀರು ತುಂಬಿದ್ದರಿಂದ ಬೋಟ್‍ನಲ್ಲೇ ತೆರಳಬೇಕಾಯಿತು. ಹೀಗಾಗಿ ನಾನು ಬೋಟ್‍ನಲ್ಲೇ ತೆರಳಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದರು.

ಈ ಹಂತದಲ್ಲಿ ಸಿದ್ದರಾಮಯ್ಯ ನೆರವಿಗೆ ಧಾವಿಸಿದ ರಾಮಲಿಂಗ ರೆಡ್ಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲೆಲ್ಲಿ ಹೋಗಿದ್ದರೋ ಅದೇ ರಸ್ತೆಯಲ್ಲಿ ನಾವು ಹೋಗಿದ್ದೆವು' ಎಂದು ಸ್ಪಷ್ಟಣೆ ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಸವರಾಜ ಬೊಮ್ಮಾಯಿ, ‘ಒಂದೂವರೆ ಅಡಿ ನೀರಿನಲ್ಲಿ ನಮ್ಮ ನಾಯಕರನ್ನು ಬೋಟ್‍ನಲ್ಲಿ ಕರೆದುಕೊಂಡು ಹೋದರಲ್ಲ ಪುಣ್ಯಾತ್ಮರು ಯಾರಪ್ಪಾ?' ಎಂದು ಕಾಲೆಳೆದರು.

ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ, ‘ಒಂದೂವರೆ ಅಡಿ ನೀರಿನಲ್ಲಿ ದೋಣಿ ಹೋಗಲು ಸಾಧ್ಯವೇ ಇಲ್ಲ. ಸರಕಾರವೇ ನಿಯೋಜಿಸಿದ್ದ ಎನ್‍ಡಿಆರ್‍ಎಫ್‍ನ ಬೋಟ್‍ನಲ್ಲಿ ನಾನು ತೆರಳಿದ್ದೇನೆ. ಯಾರಿಗಾದರೂ ಸಂಶಯವಿದ್ದರೆ ನನ್ನೊಂದಿಗೆ ಆಗಮಿಸಿದ ಅಧಿಕಾರಿಗಳನ್ನು ಕೇಳಬಹುದು' ಎಂದರು.

‘ನಾನು ಮೂರು ಅಡಿ ನೀರಿನಲ್ಲಿ ನಡೆದುಕೊಂಡು ಹೋಗಿದ್ದೇನೆ. ನಿಮಗೆ ಯಾರೋ ಮಿಸ್ ಗೈಡ್ ಮಾಡಿರಬಹುದು' ಎಂದು ಬಸವರಾಜ ಬೊಮ್ಮಾಯಿ ದೂರಿದರು. ‘ನಾನು ನನ್ನ ಸ್ವಂತ ಬೋಟ್‍ನಲ್ಲಿ ಹೋಗಿಲ್ಲ. ಎನ್‍ಡಿಆರ್ ಎಫ್ ಬೋಟ್ ಅದು. ನಾನು ಹೋದ ದಿನ ಐದು ಅಡಿ ನೀರಿತ್ತು. ಎನ್‍ಡಿಆರ್‍ಎಫ್ ಸಿಬ್ಬಂದಿ ಮೋಟಾರು ಎಳೆದೇ ಓಡಿಸಿದರು. ಒಂದೂವರೆ ಅಡಿ ನೀರು ಇತ್ತು ಎಂಬುದು ಸರಿಯಲ್ಲ. ಕೆಲವರಿಗೆ ಕಣ್ಣಿಗೆ ಆಳ ಗೊತ್ತಾಗುವುದಿಲ್ಲ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ನಾನು ಹೋದ ಬಡಾವಣೆಯಲ್ಲಿ ಕಾರು ಮತ್ತು ಬೈಕುಗಳೆಲ್ಲವೂ ನೀರಿನಲ್ಲಿ ಸಂಪೂರ್ಣ ಮುಳುಗಿದ್ದವು. ಒಂದೂವರೆ ಅಡಿ ನೀರು ಬಂದರೆ ಕಾರು ಮುಳುಗಲು ಸಾಧ್ಯವೇ? ನಾಲ್ಕೈದು ಅಡಿಗಳಷ್ಟು ನೀರು ಇತ್ತು. ಹೀಗಾಗಿ ಪರಿಶೀಲನೆ ನಡೆಸಲು ನಾನು ಆ ಬಡಾವಣೆಗೆ ಬೋಟ್‍ನಲ್ಲೇ ತೆರಳಿದೆ' ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News