ಬೆಂಗಳೂರು: ರಾಜಕಾಲುವೆ ಒತ್ತುವರಿ ಪಟ್ಟಿಯಲ್ಲಿ ಪ್ರತಿಷ್ಠಿತ ಕಂಪೆನಿಗಳು

Update: 2022-09-13 15:21 GMT

ಬೆಂಗಳೂರು, ಸೆ.13: ಮಹದೇವಪುರ ವಲಯದಲ್ಲಿ ಬಿಲ್ಡರ್ ಗಳು ಮತ್ತು ಐಟಿ ಪಾರ್ಕ್‍ಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದು, ಮಹದೇವಪುರ ವಲಯದ ರಾಜಕಾಲುವೆ ವಿಭಾಗದ ಸಹಾಯಕ ನಿರ್ದೇಶಕರು ಮಹದೇವಪುರ ಜಂಟಿ ಆಯುಕ್ತರಿಗೆ ಒತ್ತುವರಿ ಮಾಡಿಕೊಂಡಿರುವವರ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ. ಪಟ್ಟಿಯಲ್ಲಿ ಪ್ರತಿಷ್ಠಿತ ವಿಪ್ರೋ, ಕೊಲಂಬಿಯಾ ಆಸ್ಪತ್ರೆ, ಬಾಗಮನೆ ಟೆಕ್‍ಪಾರ್ಕ್ ಕಂಪನಿಗಳು ಸೇರಿವೆ. 

ಮಹದೇವಪುರದಲ್ಲಿರುವ ಬಾಗಮನೆ ಟೆಕ್‍ಪಾರ್ಕ್, ಪೂರ್ವ ಪ್ಯಾರಡೈಸ್ ನೀರು ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿವೆ. ಜುನ್ನಸಂದ್ರ, ಹಲನಾಯಕನಹಳ್ಳಿ, ದೊಡ್ಡಕನ್ನಹಳ್ಳಿಯಲ್ಲಿರುವ ಆರ್.ಬಿ.ಡೆವಲಪರ್ಸ್, ದೊಡ್ಡಕನ್ನಹಳ್ಳಿಯಲ್ಲಿ ವಿಪ್ರೋ, ಬೆಳ್ಳಂದೂರಿನಲ್ಲಿ ಇಕೋ-ಸ್ಪೇಸ್ ಒತ್ತುವರಿ ಪಟ್ಟಿಯಲ್ಲಿವೆ. ಬೆಳ್ಳಂದೂರು ಮತ್ತು ಹೂಡಿಯಲ್ಲಿ ಗೋಪಾಲನ್, ದಿವ್ಯಾ ಸ್ಕೂಲ್ ನೀರುಗಾಲುವೆ ಒತ್ತುವರಿ ಪಟ್ಟಿಯಲ್ಲಿವೆ. ಆರ್.ನಾರಾಯಣಪುರದಲ್ಲಿರುವ ಆದರ್ಶ ಸಂಸ್ಥೆ ನೀರುಗಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ. 

ರಾಮಗೊಂಡನಹಳ್ಳಿಯಲ್ಲಿರುವ ಕೊಲಂಬಿಯಾ ಏಶಿಯಾ ಆಸ್ಪತ್ರೆ, ಕಾಡುಬಿಸನಹಳ್ಳಿಯಲ್ಲಿ ನ್ಯೂ ಹಾರಿಜನ್ ಕಾಲೇಜ್, ದೇವರುಬಿಸನಹಳ್ಳಿಯಲ್ಲಿ ಆದರ್ಶ ರಿಟ್ರೀಟ್, ಎಬಿಕೆ ಮತ್ತು ಯಮಲೂರಿನಲ್ಲಿ ಎಪಿಸ್ಲಾನ್ ಮತ್ತು ದಿವ್ಯಾಶ್ರೀ ಸಂಸ್ಥೆಗಳು ಒತ್ತುವರಿ ಪಟ್ಟಿಯಲ್ಲಿವೆ. ಮಾರತಹಳ್ಳಿ ಮತ್ತು ಕರಿಯಮ್ಮನ ಅಗ್ರಹಾರದಲ್ಲಿ ಪ್ರೆಸ್ಟೀಜ್, ಸಲಪುರಿಯಾ ಹಾಗೂ ಆದರ್ಶ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿವೆ. ಚಲ್ಲಘಟ್ಟದಲ್ಲಿ ನಲಪಾಡ್ ಅಂಡ್ ಸಂಸ್ಥೆ ಒತ್ತುವರಿ ಪಟ್ಟಿಯಲ್ಲಿವೆ.  

ಸರ್ವೇ ನಂಬರ್‍ಗಳ ಸಹಿತವಾಗಿ ಒತ್ತುವರಿ ಪಟ್ಟಿಯನ್ನು ಕಳೆದ ತಿಂಗಳು 17ರಂದೇ ಜಂಟಿ ಆಯುಕ್ತರಿಗೆ ಪತ್ರವನ್ನು ಬರೆದಿದ್ದು, ಬಿಬಿಎಂಪಿ ಒತ್ತುವರಿಯನ್ನು ತೆರವು ಮಾಡುವಲ್ಲಿ ತಾರತಮ್ಯ ಅನುಸರಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಒತ್ತುವರಿ ಪಟ್ಟಿ ವೈರಲ್ ಆಗುತ್ತಿವೆ. 

ಇದನ್ನೂ ಓದಿ>>> ಪ್ರವಾಹ ಪೀಡಿತ ಪ್ರದೇಶದಲ್ಲಿ ಬೋಟ್‍ನಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ: ಸದನದಲ್ಲಿ ಭಾರೀ ಚರ್ಚೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News