ಸೆ.17: ಸ್ವಚ್ಚ ಕರಾವಳಿ-ಸುರಕ್ಷಿತ ಸಾಗರ ಅಭಿಯಾನದ ಯಶಸ್ವಿಗೆ ದ.ಕ. ಡಿಸಿ ಕರೆ
ಮಂಗಳೂರು : ಕೇಂದ್ರ ಸರಕಾರದ ಭೂ ವಿಜ್ಞಾನ ಸಚಿವಾಲಯದ ನೇತೃತ್ವದಲ್ಲಿ ಕರಾವಳಿಯಲ್ಲಿ ಸ್ವಚ್ಚತಾ ಅರಿವು ಮೂಡಿಸುವ ಉದ್ದೇಶದಿಂದ ದ.ಕ.ಜಿಲ್ಲಾಡಳಿತದ ವತಿಯಿಂದ ಸೆ.೧೭ರಂದು ನಡೆಯುವ ಸ್ವಚ್ಚ ಕರಾವಳಿ-ಸುರಕ್ಷಿತ ಸಾಗರ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕರೆ ನೀಡಿದ್ದಾರೆ.
ಅಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ 75 ದಿನಗಳ ‘ಸ್ವಚ್ಚ ಕರಾವಳಿ- ಸುರಕ್ಷಿತ ಸಾಗರ’ ಎಂಬ ರಾಷ್ಟ್ರೀಯ ಅಭಿಯಾನಕ್ಕೆ ಜು.30ರಂದು ಚಾಲನೆ ನೀಡಿದ್ದರು. ಈ ಅಭಿಯಾನವು ಸೆ.17ರ ಅಂತಾರಾಷ್ಟ್ರೀಯ ಸಾಗರ ಸ್ವಚ್ಚತಾ ದಿನದಂದು ಕೊನೆಗೊಳ್ಳಲಿದೆ. ಸೆ.17ರ ಬೆಳಗ್ಗೆ 7ಕ್ಕೆ ನಗರದ ಸಸಿಹಿತ್ಲು ಬೀಚ್‌ನಿಂದ ಆರಂಭಗೊಳ್ಳುವ ಅಭಿಯಾನವು ಮುಕ್ಕ, ಸುರತ್ಕಲ್ ಲೈಟ್‌ಹೌಸ್, ದೊಡ್ಡಕೊಪ್ಪ, ಗುಡ್ಡೆಕೊಪ್ಲ, ಇಡ್ಯಾ, ಹೊಸಬೆಟ್ಟು, ಚಿತ್ರಾಪುರ, ಬೈಕಂಪಾಡಿ, ತಣ್ಣೀರು ಬಾವಿ, ಬೆಂಗ್ರೆ, ಉಳ್ಳಾಲ, ಸೋಮೇಶ್ವರ, ಕೋಟೆಕಾರ್, ತಲಪಾಡಿಯವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಯುವಜನರು, ಮಹಿಳಾ ಸಂಘ ಹಾಗೂ ಇತರೆ ಸರಕಾರೆತರ ಸಂಘ-ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ರಾಷ್ಟ್ರೀಯ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.