ಕಾರು ಕಳವು ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
Update: 2022-09-13 23:08 IST
ಮಂಗಳೂರು : ನಗರದಲ್ಲಿ ಸುಮಾರು 25 ವರ್ಷ ಹಿಂದೆ ಅಂಬಾಸಿಡರ್ ಕಾರು ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪಿರಿಯಾಪಟ್ಟಣದ ಆರೆನಹಳ್ಳಿ ನಿವಾಸಿ ಅಸ್ಲಾಂ ಯಾನೆ ಅಸ್ಲಾಂ ಪಾಷಾ ಎಂಬಾತನನ್ನು ಬಂದರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಈತನ ವಿರುದ್ಧ 1997ರಲ್ಲಿ ಅಂಬಾಸಿಡರ್ ಕಾರು ಕಳವಿಗೆ ಸಂಬಂಧಿಸಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ಆರೋಪಿಯು 2000ನೆ ಇಸವಿಯಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
2015ರಲ್ಲಿ ಆರೋಪಿಯ ಪತ್ತೆಗೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆರೋಪಿಯು ತನ್ನ ವಿಳಾಸವನ್ನು ಪೀಣ್ಯ, ಬೆಂಗಳೂರು ಎಂದು ನೀಡಿರುವುದರಿಂದ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಕೊನೆಗೂ ಆರೋಪಿಯ ಮೂಲ ವಿಳಾಸ ಪತ್ತೆ ಹಚ್ಚಿದ ಪೊಲೀಸ್ ಸಿಬ್ಬಂದಿ ಪುಟ್ಟರಾಮ ಮತ್ತು ರವಿ ಕುಮಾರ್ ಮಂಗಳವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.