×
Ad

ಬೆಂಗಳೂರಿನಲ್ಲಿ ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ

Update: 2022-09-14 18:53 IST

ಬೆಂಗಳೂರು, ಸೆ.14: ನಗರದಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆಯು ಮುಂದುವರೆದಿದ್ದು, ಬುಧವಾರ ಯಲಹಂಕ, ಪಶ್ಚಿಮ ಹಾಗೂ ಮಹದೇವಪುರ ವಲಯ ಸೇರಿದಂತೆ ಒಟ್ಟು 11 ಒತ್ತುವರಿಗಳನ್ನು ತೆರವುಗೊಳಿಸಲಾಯಿತು.

ಯಲಹಂಕ ವಲಯದಲ್ಲಿ 4 ಒತ್ತುವರಿಗಳನ್ನು ತೆರವುಗೊಳಿಸಿದ್ದು, ಈ ಪೈಕಿ ಕುವೆಂಪು ನಗರ ವಾರ್ಡ್‍ನ ಸಿಂಗಾಪುರ ವ್ಯಾಪ್ತಿಯಲ್ಲಿ ಸರ್ವೆ ಸಂ.81 ಹಾಗೂ 82ರಲ್ಲಿ ಬರುವ ಬಾಲನ್ ಆಗ್ರೋ ಪ್ರಾಡಕ್ಟ್ ಲಿ. ಸಂಸ್ಥೆಯ ಜ್ಯೂಸ್ ಫ್ಯಾಕ್ಟರಿಯಿಂದ ಸುಮಾರು 21 ಮೀಟರ್ ಅಗಲ, 65 ಮೀಟರ್ ಉದ್ದದ ಜಾಗವನ್ನು ಒತ್ತುವರಿ ತೆರವು ಮಾಡಲಾಯಿತು. ಈ ಒತ್ತುವರಿ ಸ್ಥಳದಲ್ಲಿ ಟ್ರಾನ್ಸ್‍ಫಾರ್ಮರ್ ಸೇರಿದಂತೆ ಕೆಲ ಸಂಗ್ರಹ ವಸ್ತುಗಳನ್ನು ಕೂಡಲೆ ಸ್ಥಳಾಂತರಿಸಲು ಜ್ಯೂಸ್ ಫ್ಯಾಕ್ಟರಿಗೆ ಸೂಚನೆ ನೀಡಲಾಗಿದೆ. ಸಿಂಗಾಪುರ ಕೆರೆಯಿಂದ ಅಬ್ಬಿಗೆರೆ ಕೆರೆಗೆ ಹರಿಯುವ ಮಳೆ ನೀರುಗಾಲುವೆ(ಕಮಾಂಡೊ ಗ್ಲೋರಿ ಅಪಾಟ್ಮೆರ್ಂಟ್ ಹಿಂಭಾಗ) ಸರ್ವೇ ಸಂ.97 ಹಾಗೂ 100ರಲ್ಲಿ 2.4 ಮೀಟರ್ ಅಗಲ ಹಾಗೂ 200 ಮೀಟರ್ ಉದ್ದ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಿತು.

ಪಶ್ಚಿಮ ವಲಯದಲ್ಲಿ 2 ಒತ್ತುವರಿಗಳನ್ನು ತೆರವುಗೊಳಿಸಿದ್ದು, ಈ ಪೈಕಿ ಶುಭಾಷ್ ನಗರದ ಬರಗಿ ಮುದ್ದೇನಹಳ್ಳಿಯಲ್ಲಿ 120 ಚ.ಮೀ ಖಾಲಿ ಜಾಗ ಹಾಗೂ 120 ಚ.ಮೀ ರೈಲ್ವೆ ಇಲಾಖೆಯ ಜಾಗ ಸೇರಿದಂತೆ ಒಟ್ಟು 240 ಚ.ಮೀ.ನಷ್ಟು ಒತ್ತುವರಿ ತೆರವು ಮಾಡಲಾಯಿತು. ಹಾಗೆಯೇ ಮಹದೇವಪುರ ವಲಯದ ಮುನ್ನೇಕೊಳಲು ವ್ಯಾಪ್ತಿಯಲ್ಲಿ ಖಾಲಿ ಜಾಗವನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆದಿದೆ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ 4 ಒತ್ತುವರಿಗಳನ್ನು ತೆರವುಗೊಳಿಸಿದ್ದು, ಈ ಪೈಕಿ ಹೊರಮಾವು ವಾರ್ಡ್‍ನ ಪಟೇಲ್ ರಾಮಯ್ಯ ಲೇಔಟ್‍ನ ಕೊತ್ತನೂರು ಹಳ್ಳಿ ಸರ್ವೇ ಸಂ. 6, 7, 30, 14 ಸೇರಿದಂತೆ ಒಟ್ಟಾರೆ 600ಮೀ. ಉದ್ದ ಹಾಗೂ 19.5 ಮೀ. ಅಗಲದ ರಾಜಕಾಲುವೆಯ ಒತ್ತುವರಿ ತೆರವು ಮಾಡಲಾಗುತ್ತಿದೆ. ಒತ್ತುವರಿ ಸ್ಥಳದಲ್ಲಿ 25 ಮೀ. ಉದ್ದ ಮತ್ತು 3 ಮೀ. ಎತ್ತರದ 2 ಕಾಂಪೌಂಡ್ ಗೋಡೆಗಳನ್ನು ಕೆಡವಲಾಗಿದ್ದು, ಒಂದು 100 ಚದರ ಅಡಿಯ ತಾತ್ಕಾಲಿಕ ಶೆಡ್ ಹಾಗೂ 200 ಚದರ ಅಡಿಯ ಮತ್ತೊಂದು ಶೆಡ್ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ನಾಳೆ 100 ಮೀ.ನ ಸ್ಕೇಟಿಂಗ್ ಮೈದಾನ ಸೇರಿದಂತೆ ಉಳಿದ ಒತ್ತುವರಿಯನ್ನು ತೆರವುಗೊಳಿಸಲಾಗುವುದು.

ಚೆಲ್ಲಘಟ್ಟದ ಸರ್ವೇ ಸಂ. 70/14ರಲ್ಲಿರುವ ನಲಪಾಡ್ ಅಕಾಡೆಮಿಯಿಂದ ಒತ್ತುವರಿಯಾಗಿದ್ದ 2.5 ಮೀ. ಅಗಲ ಹಾಗೂ 150.5 ಮೀ. ಉದ್ದದ ಕಾಲುವೆ ಜಾಗದಲ್ಲಿ ಅಳವಡಿಸಿದ್ದ ಕಾಂಕ್ರಿಟ್ ಅನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಿತು.

ಉಚ್ಚ ನ್ಯಾಯಲಯ ಹಾಗೂ ಲೋಕಾಯುಕ್ತ ಆದೇಶದ ಮೇರೆಗೆ ಬುಧವಾರ ಗರುಡಾಚಾರಪಾಳ್ಯ ಕೆರೆಯಿಂದ ಮಹದೇವಪುರ ಕೆರೆಗೆ ಸೇರುವ ಮಳೆ ನೀರುಗಾಲುವೆಯನ್ನು ಪೂರ್ವ ಪಾಕ್ರ್ರಿಡ್ಜ್ ಸ್ವತ್ತು ಹಾಗೂ ಭಾಗ್ಮನೆ ಟೆಕ್‍ಪಾರ್ಕ್ ಸ್ವತ್ತಿನ ಮೂಲಕ ಹಾದು ಹೋಗುವ ಕಾಲುವೆಯನ್ನು ಬಿಬಿಎಂಪಿ ಅಧಿಕಾರಿಗಳು, ಸರಕಾರದ ಭೂಮಾಪಕ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳಿಂದ ಸರ್ವೆ ಕಾರ್ಯ ನಡೆಸಲಾಯಿತು.

ಭಾಗ್ಮನೆ ಟೆಕ್‍ಪಾರ್ಕ್‍ನಲ್ಲಿ 2.5 ಮೀ. ಅಗಲದ ರಾಜಕಾಲುವೆಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿ ಮುಚ್ಚಿರುವುದು. ಪೂರ್ವ ಪಾಕ್ರ್ರಿಡ್ಜ್‍ನಲ್ಲಿ 2.5 ಮೀಟರ್ ಅಗಲದ ಸ್ಥಳದಲ್ಲಿ ಕಟ್ಟಡ, ಖಾಲಿ ಜಾಗ ಹಾಗೂ ರಸ್ತೆಯನ್ನು ನಿರ್ಮಿಸಿರುವುದು. ಗರುಡಾಚಾರ್ ಪಾಳ್ಯ ಕೆರೆಯಿಂದ ಮಹದೇವಪುರ ಕೆರೆಯ ಭಾಗದಲ್ಲಿ ಸುಮಾರು 13 ಮೀಟರ್ ಅಗಲದ ರಾಜಕಾಲುವೆಯ ಮೇಲೆ ಕಾಂಪೌಂಡ್ ವಾಲ್, ಕಟ್ಟಡ ಹಾಗೂ ಶೆಡ್ ನಿರ್ಮಾಣ ಮಾಡಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.:

ನಗರದಲ್ಲಿ ಶಾಂತಿನಿಕೇತನ ಲೇಔಟ್‍ನಲ್ಲಿ ಶೇ.25ರಷ್ಟು ಬಾಕಿ ಒತ್ತುವರಿ ತೆರವುಗೊಳಿಸಬೇಕಿದೆ. ವಾಗ್ದೇವಿ ಲೇಔಟ್‍ನಲ್ಲಿ ಶೇ.25ರಷ್ಟು ಬಾಕಿ ಒತ್ತುವರಿ ತೆರವುಗೊಳಿಸಬೇಕಿದೆ. ಚಲ್ಲಘಟ್ಟ ವ್ಯಾಪ್ತಿಯಲ್ಲಿ ಶೇ.50 ರಷ್ಟು ಒತ್ತುವರಿ ತೆರವುಗೊಳಿಸಲಾಗಿದೆ. ಪಾಪಯ್ಯ ರೆಡ್ಡಿ ಲೇಔಟ್‍ನಲ್ಲಿ ಒತ್ತುವರಿ ಮಾಡಿರುವುದನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಸದರಮಂಗಲ ಕೆರೆಯಿಂದ ಬೆಳ್ಳತ್ತೂರಿನವರೆಗೆ ಒತ್ತುವರಿಯನ್ನು ಗುರುತಿಸಬೇಕಿದೆ. ದೊಡ್ಡಕನಹಳ್ಳಿ ಕೆರೆಯಿಂದ ಸೋಲ್ ಕೆರೆವರೆಗೆ ಒತ್ತುವರಿಯನ್ನು ಗುರುತಿಸಬೇಕಿದೆ. ಟಿಝೆಡ್‍ಇಡಿ ಅಪಾರ್ಟ್‍ಮೆಂಟ್‍ನಿಂದ ಶೀಲವಂತ ಕೆರೆವರೆಗೆ ಒತ್ತುವರಿಯನ್ನು ಗುರುತಿಸಬೇಕಿದೆ. ಪಟ್ಟಂದೂರು ಅಗ್ರಹಾರ ಕೆರೆಯಿಂದ ನಲ್ಲೂರಹಳ್ಳಿವರೆಗೆ ಒತ್ತುವರಿಯನ್ನು ಗುರುತಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News