ಮುಂದುವರಿದ ಲೋಕಾಯುಕ್ತ ದಾಳಿ: ಉಪ ತಹಶೀಲ್ದಾರ್ ಬಲೆಗೆ

Update: 2022-09-15 12:39 GMT

ಬೆಂಗಳೂರು, ಸೆ.15: ಸಿಂಧುತ್ವ ಪ್ರಮಾಣ ಪತ್ರ ನೀಡಲು ಲಂಚ ಕೇಳಿದ ಆರೋಪದಡಿ ಬೆಂಗಳೂರು ಉತ್ತರ ತಾಲ್ಲೂಕು ಕಚೇರಿಯ ಉಪ ತಹಶೀಲ್ದಾರ್ ಪಿ.ಎಂ.ಶ್ರೀಕಾಂತ್ ಅವರನ್ನು ಲೋಕಾಯುಕ್ತ (Lokayukta) ಪೊಲೀಸರು ಬಂಧಿಸಿದ್ದಾರೆ.

ಲೋಕಾಯುಕ್ತ ಬಿ.ಎಸ್.ಪಾಟೀಲ ಅವರ ಸೂಚನೆಯಂತೆ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮತ್ತು ಬೆಂಗಳೂರು ನಗರ ಎಸ್ಪಿ ಅಶೋಕ್ ಕೆ.ವಿ. ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಶಂಕರನಾರಾಯಣ ನೇತೃತ್ವದ ತಂಡ ಗುರವಾರ ಈ ಕಾರ್ಯಾಚರಣೆ ನಡೆಸಿದೆ.

ವ್ಯಕ್ತಿಯೊಬ್ಬರು ಯಶವಂತಪುರ ಹೋಬಳಿ ಕೋಡಿಗೆಹಳ್ಳಿಯಲ್ಲಿ ಹೊಂದಿರುವ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿನ ಬಾಬ್ತು ಪರಿಹಾರದ ಮೊತ್ತ ಪಡೆಯಲು ಜಮೀನು ಮಾಲಕರು ಸಿಂಧುತ್ವ ಪ್ರಮಾಣಪತ್ರ ಸಲ್ಲಿಸಬೇಕಿತ್ತು. 

ಇದಕ್ಕಾಗಿ ಸಿಂಧುತ್ವ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ತದನಂತರ, ಉಪ ತಹಶೀಲ್ದಾರ್ ಶ್ರೀಕಾಂತ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ 13 ಲಕ್ಷ ಲಂಚ ನೀಡುವಂತೆ ಅಧಿಕಾರಿ ಆರಂಭದಲ್ಲಿ ಬೇಡಿಕೆ ಇಟ್ಟಿದ್ದರು. ನಂತರ ಇಬ್ಬರ ನಡುವೆ ಮಾತುಕತೆ ನಡೆದಿದ್ದು, 45 ಸಾವಿರ ರೂ. ನೀಡಿದರೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಆರೋಪಿ ಅಧಿಕಾರಿ ಹೇಳಿದ್ದರು.

ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ಸಲ್ಲಿಸಿದ್ದರು. ಆರೋಪಿಯ ಸೂಚನೆಯಂತೆ ಉಪ ತಹಶೀಲ್ದಾರ್ ಕಚೇರಿಗೆ ತೆರಳಿದ ದೂರುದಾರರು ಲಂಚದ ಹಣ ತಲುಪಿಸಿದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಶ್ರೀಕಾಂತ್ ಅವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News