ಅಕ್ರಮ ಮರಳು ಸಾಗಾಟ ಆರೋಪ; ಲಾರಿ ಸಹಿತ 7 ಮಂದಿ ಸೆರೆ
Update: 2022-09-16 22:50 IST
ಉಳ್ಳಾಲ: ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಏಳು ಮಂದಿಯನ್ನು ಬಂಧಿಸಿ ಮರಳು ಸಾಗಾಟದ ಲಾರಿ ಯನ್ನು ವಶಪಡಿಸಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ಶುಕ್ರವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ತಲಪಾಡಿ ನಿವಾಸಿ ರಿಯಾಝ್ (28), ಕೆಸಿರೋಡ್ ನಿವಾಸಿ ಅಬೂಬಕ್ಕರ್ (53), ಸೋಮೇಶ್ವರ ಗ್ರಾಮ ನಿವಾಸಿ ರಘುನಾಥ (40), ತಲಪಾಡಿ ಚೆಕ್ ಪೋಸ್ಟ್ ನಿವಾಸಿ ರಾಜೇಶ್ (50), ಕುದ್ರು ನಿವಾಸಿಗಳಾದ ಅತುಲ್ (22), ರಾಮದಾರಿ(28) ಮತ್ತು ಪಂಕಜ್ (24) ಎಂದು ಗುರುತಿಸಲಾಗಿದೆ.
ಬಂಧಿತರು ತಲಪಾಡಿ ಕುದ್ರು ಕಡೆಯಿಂದ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಅದನ್ನು ಲಾರಿಗೆ ಲೋಡ್ ಮಾಡಿದ ಬಳಿಕ ತೆಂಗಿನ ಗರಿಯಿಂದ ಮುಚ್ಚಿ ಕೇರಳ ಕಡೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.