ಜಕ್ಕೂರು ವೈಮಾನಿಕ ತರಬೇತಿ ಶಾಲೆಯ ಜಮೀನು ಖಾಸಗಿಗೆ ?: ಲೋಕಾಯುಕ್ತರಿಗೆ ದೂರು

Update: 2022-09-17 14:06 GMT

ಬೆಂಗಳೂರು, ಸೆ.17: ಜಕ್ಕೂರಿನಲ್ಲಿರುವ ಸರಕಾರಿ ವೈಮಾನಿಕ ತರಬೇತಿ ಶಾಲೆಗೆ ಸೇರಿದ ಸುಮಾರು 1,500ಕೋಟಿ ರೂ. ಮೌಲ್ಯದ 75 ಎಕರೆ ಜಾಗವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ(ಪಿಪಿಪಿ) ಹೆಸರಿನಲ್ಲಿ ಖಾಸಗಿಯವರಿಗೆ ವಹಿಸಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ, ಲೋಕಾಯುಕ್ತರಿಗೆ ದೂರು ಸಲ್ಲಿಸಿದೆ.

ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ರಾಘವೇಂದ್ರ, ಜಕ್ಕೂರಿನಲ್ಲಿ ವೈಮಾನಿಕ ಶಾಲೆ ನಿರ್ಮಿಸಲು ಮೈಸೂರು ಸಂಸ್ಥಾನದಿಂದ ಜಮೀನು ನೀಡಲಾಗಿತ್ತು. ಇದೀಗ ಅಭಿವೃದ್ದಿ ಹೆಸರಿನಲ್ಲಿ ಶಾಲೆ ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ. ಅಲ್ಲದೆ, ಖಾಸಗಿಯವರ ವಶಕ್ಕೆ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರಸ್ತೆ ಸಂಪರ್ಕ ವಿಸ್ತರಿಸಲು 2014ರಲ್ಲಿ ಈ ಮಾರ್ಗದಲ್ಲಿ 12 ಮೀಟರ್ ಎತ್ತರದ ಎಲಿವೇಟೆಡ್ ಕಾಮಗಾರಿ ನಡೆಸುವುದಕ್ಕೆ ಅನುಮತಿ ನೀಡಲಾಗಿತ್ತು. ಇದರಿಂದ 950 ಮೀಟರ್‍ನಷ್ಟಿದ್ದ ರನ್ ವೇ ಕೇವಲ 450 ಮೀಟರ್‍ಗಳಿಗೆ ಇಳಿದಿದೆ. ಇದೀಗ ಮೆಟ್ರೋ ರೈಲು ಕಾಮಗಾರಿ ನಡೆಸುವುದಕ್ಕೆ ಅನುಮತಿ ನೀಡಿದ್ದು, ವಿಮಾನಗಳ ಲ್ಯಾಂಡಿಂಗ್ ಅಪಾಯಕಾರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೂ ಅವರು ದೂರಿದರು.

ರನ್ ವೇ ಕಡಿಮೆಯಾದ ಹಿನ್ನೆಲೆಯಲ್ಲಿ ಖಾಸಗಿ ಜಮೀನು ಖರೀದಿಸಿ 170 ಮೀಟರ್ ವಿಸ್ತರಿಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಇದು ಈವರೆಗೂ ಯಾವುದೇ ಬೆಳವಣಿಗೆ ಕಂಡಿಲ್ಲ. ಬದಲಾಗಿ ಕ್ರೀಡಾ ಇಲಾಖೆಯೊಂದಿಗೆ ಖಾಸಗಿಯವರು ಅಭಿವೃದ್ಧಿ ಪಡಿಸಲು ಮುಂದಾಗುತ್ತಿದ್ದಾರೆ. ಸರಕಾರಿ ಶಾಲೆ ಉಳಿಯಬೇಕಾಗಿದ್ದವರೇ ಸರಕಾರಿ ಜಾಗ ಕಬಳಿಸಲು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. 

'ಖಾಸಗಿಯವರಿಗೆ ಜಾಗ ನೀಡುವುದಿಲ್ಲ': ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಹಂತಹಂತವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಖಾಸಗಿಯವರಿಗೆ ನೀಡುವ ಯಾವುದೇ ಪ್ರಶ್ನೆ ಇಲ್ಲ ಎಂದು ವಿಧಾನಸಭೆಯ ಕಲಾಪದಲ್ಲಿಯೇ ಭರವಸೆ ನೀಡಿದ್ದೇನೆ, ನಾನು ಮತ್ತೊಮ್ಮೆ ಅದನ್ನು ಪುನರುಚ್ಚರಿಸುತ್ತಿದ್ದೇನೆ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News