×
Ad

ಕಡಲತೀರದ ಸ್ವಚ್ಛತೆ, ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್

Update: 2022-09-17 19:50 IST

ಮಲ್ಪೆ : ನಿಸರ್ಗದತ್ತವಾಗಿ ದೊರಕಿರುವ ಸುಂದರವಾದ ಕಡಲ ತೀರಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡಲು ಪ್ರತಿಯೊಬ್ಬ ನಾಗರಿಕರೂ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಏಕ ಬಳಕೆ ಪ್ಲಾಸ್ಟಿಕ್‌ನ ಬಳಕೆಯನ್ನು ತ್ಯಜಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕರೆ ನೀಡಿದ್ದಾರೆ. 

ಶನಿವಾರ ಮಲ್ಪೆ ಕಡಲ ಕಿನಾರೆಯಲ್ಲಿ ಅಝಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಭೂ ವಿಜ್ಞಾನ ಇಲಾಖೆ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಹಾಗೂ ಸ್ಧಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೀಚ್ ಸ್ವಚ್ಛತೆ ಹಾಗೂ ಸುರಕ್ಷತೆಯ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ‘ಸ್ವಚ್ಛ ಸಾಗರ ಸುರಕ್ಷಿತ ಸಾಗರ’ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪರಿಸರ ರಕ್ಷಣೆಗಾಗಿ ಪೂರಕ ಪ್ರಯತ್ನಗಳು ಹಾಗೂ ಚಟುವಟಿಗಳು ದೈನಂದಿನ ದಿನಚರಿಯ ಅಂಗವಾಗಬೇಕು. ಯುವಜನರಿಗೆ ಬಾಲ್ಯದಿಂದಲೇ ಇಂತಹ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ  ಪ್ರಯತ್ನಗಳು ಪ್ರತೀ ಮನೆ ಹಾಗೂ ಶಾಲೆಗಳಲ್ಲಿ ನಡೆಯಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಕಡಲ ತೀರದ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೇ ಇದೊಂದು ನಿರಂತರ ಪ್ರಕ್ರಿಯೆಯಾಗಬೇಕು. ಆ ಮೂಲಕ ಮನುಷ್ಯರ ಹಾಗೂ ಪ್ರಕೃತಿಯ ನಡುವೆ ಪರಸ್ವರ ಸಾಮರಸ್ಯ ಬೆಸೆಯಲು ಸಾಧ್ಯ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಮಲ್ಪೆ ಬೀಚ್‌ನ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಕಡಲ ತೀರದ ಸ್ವಚ್ಛತೆ ಹಾಗೂ ಸುರಕ್ಷತೆ ಅತೀ ಮಹತ್ವದ್ದಾಗಿದೆ ಎಂದರು.

ಪ್ರತಿಯೊಬ್ಬರೂ ಸ್ವಯಂ ಕಾಳಜಿಯಿಂದ ಸಮುದ್ರ ತೀರದ ಸ್ವಚ್ಛತಾ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೊಂಡು, ಪ್ರಕೃತಿ ದತ್ತವಾಗಿ ಬಂದಿರುವ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ ಅಧೀಕ್ಷಕ ಅಬ್ದುಲ್ ಅಹಮದ್, ಭಾರತೀಯ ತಟ ರಕ್ಷಣಾ ಪಡೆಯ ಕಮಾಂಡೆಂಟ್ ಅವಿನಾಶ್, ಉಡುಪಿ ನಗರಸಭೆಯ ಪೌರಾಯುಕ್ತ ಡಾ.ಉದಯ್‌ಕುಮಾರ್ ಶೆಟ್ಟಿ, ಕೇಂದ್ರ ಸರ್ಕಾರದ ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಡಾ.ಆಶಾ, ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂದೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನೆಹರೂ ಯುವ ಕೇಂದ್ರದ ಯುವಜನ ಸಮನ್ವಯಾಧಿಕಾರಿ ವಿಲೆಪ್ರಡ್ ಡಿ.ಸೋಜಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News