ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿದ ಬಿಬಿಎಂಪಿ

Update: 2022-09-17 15:16 GMT

ಬೆಂಗಳೂರು, ಸೆ.17: ನಗರದಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವುದನ್ನು ಶನಿವಾರದಂದು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ನಗರದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿತ್ತು. ಈ ಅವಾಂತರಕ್ಕೆ ರಾಜಕಾಲುವೆ ಒತ್ತುವರಿ ಕಾರಣವೆಂದು ಒಂದು ವಾರದಿಂದ ಬಿಬಿಎಂಪಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುತ್ತಿತ್ತು. ‘ನಗರದ ಮಹದೇವಪುರ ವಲಯವೊಂದರಲ್ಲೇ ಸುಮಾರು 15 ಪ್ರಸಿದ್ಧ ಸಂಸ್ಥೆಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದವು. ಆದರೆ ಸರಕಾರವು ಈ ಸಂಸ್ಥೆಗಳಿಗೆ ಒತ್ತುವರಿ ತೆರವುಗೊಳಿಸುವುದರಿಂದ ವಿನಾಯಿತಿಯನ್ನು ನೀಡಿದೆ.

ಹಾಗೆಯೇ ಬಡವರು ಮತ್ತು ಮಧ್ಯಮ ವರ್ಗದವರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅದನ್ನು ಮಾತ್ರ ತೆರವುಗೊಳಿಸಿದೆ. ಚಲ್ಲಘಟ್ಟದಲ್ಲಿ ಸರ್ವೆ ಸಂಖ್ಯೆ 66, 67, 68, 69 ಮತ್ತು 70ರಲ್ಲಿ ನಲಪಾಡ್ ಅಕಾಡೆಮಿಯು ಒತ್ತುವರಿ ಮಾಡಿಕೊಂಡಿದೆ. ಆದರೆ ಸರ್ವೇ ಸಂಖ್ಯೆ 70ರಲ್ಲಿ ರಾಜಕಾಲುವೆಯ ಒತ್ತುವರಿಯನ್ನು ಬಿಬಿಎಂಪಿ ತೆರವುಗೊಳಿಸಿದ್ದು, ಉಳಿದ ಒತ್ತುವರಿ ತೆರವು ಮಾಡುವುದರಿಂದ ವಿನಾಯಿತಿ ನೀಡಲಾಗಿದೆ. ಬಾಗಮನೆ ಟೆಕ್ ಪಾರ್ಕ್‍ಗೂ ಈ ವಿನಾಯಿತಿಯನ್ನೇ ನೀಡಿದೆ’ ಎಂದು ಎಎಪಿ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಅಶೋಕ್ ಮೃತ್ಯುಂಜಯ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News