ಕಿರ್ಗಿಝ್-ತಾಜಿಕಿಸ್ತಾನ ಸೇನಾ ಘರ್ಷಣೆ: ಕನಿಷ್ಠ 24 ಮಂದಿ ಬಲಿ, 100ಕ್ಕೂ ಅಧಿಕ ಮಂದಿ ಗಾಯ

Update: 2022-09-17 15:59 GMT

  ಮಾಸ್ಕೊ,ಸೆ.19: ಕಿರ್ಗಿಝ್‌ಸ್ತಾನ ಹಾಗೂ ಅದರ ನೆರೆಯ ರಾಷ್ಟ್ರವಾದ ತಾಜಿಕಿಸ್ತಾನ ನಡುವೆ ಹೊಗೆಯಾಡುತ್ತಿದ್ದ ಗಡಿವಿವಾದ ಶುಕ್ರವಾರ ಭೀಕರ ಸಂಘರ್ಷದ ರೂಪವನ್ನು ಪಡೆದುಕೊಂಡಿದೆ. ಉಭಯದೇಶಗಳ ಸೈನಿಕರ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    ಘರ್ಷಣೆಯ ಹಿನ್ನೆಲೆಯಲ್ಲಿ ಎರಡೂ ದೇಶಗಳ ಸೇನಾಪಡೆಗಳು ತಮ್ಮ ಗಡಿಗಳಲ್ಲಿರುವ ನಿವಾಸಿಗಳನ್ನು ತೆರವುಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ. ಕಿರ್ಗಿಝ್‌ಸ್ತಾನ ಹಾಗೂ ತಾಜಿಕಿಸ್ತಾನಗಳೆರಡೂ , ಗಡಿ ಘರ್ಷಣೆಗೆ ಪರಸ್ಪರರನ್ನು ದೂರಿವೆ. ತಾಜಿಕಿಸ್ತಾನಕ್ಕೆ ತಾಗಿಕೊಂಡಿರುವ ತನ್ನ ಗಡಿಪ್ರದೇಶವಾದ ಬಾಕ್‌ಟೆನ್ ಪ್ರಾಂತದ ಆಸ್ಪತ್ರೆಗಳಿಗೆ ಈವರೆಗೆ 24 ಮೃತದೇಹಗಳನ್ನು ತರಲಾಗಿದೆ ಎಂದು ಕಿರ್ಗಿಝ್‌ಸ್ತಾನದ ಆರೋಗ್ಯ ಸಚಿವಾಲಯ ಶನಿವಾರ ಬೆಳಗ್ಗೆ ಪ್ರಕಟಿಸಿದ  ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ವಾರದ ಆರಂಭದಲ್ಲಿ ಉಭಯದೇಶಗಳ ಗಡಿಯಲ್ಲಿ ಘರ್ಷಣೆ ಆರಂಭಗೊಂಡಿತ್ತಾದರೂ, ಶುಕ್ರವಾರ ಉಲ್ಬಣಾವಸ್ಥೆಯನ್ನು ತಲುಪಿತು. ಈ ಕಾಳಗದಲ್ಲಿ ಎರಡೂ ದೇಶಗಳ ಸೇನಾಪಡೆಗಳು ಟ್ಯಾಂಕುಗಳು, ಫಿರಂಗಿ ಹಾಗೂ ರಾಕೆಟ್‌ಲಾಂಚರ್‌ಗಳನ್ನು ಭಾರೀ ಪ್ರಮಾಣದಲ್ಲಿ ಬಳಸಿರುವುದಾಗಿ ಮೂಲಗಳು ತಿಳಿಸಿವೆ. ತಾಜಿಕಿಸ್ತಾನದ ಸೇನಾಪಡೆಗಳು, ಕಿರ್ಗಿಝ್‌ಸ್ತಾನದ ಪ್ರಾಂತೀಯ ರಾಜಧಾನಿ ಬಾಟ್ಕೆನ್‌ನ ಮೇಲೆ ರಾಕೆಟ್ ದಾಳಿಗಳನ್ನು ನಡೆಸಿರುವುದಾಗಿ ತಿಳಿದುಬಂದಿದೆ. ಯುದ್ಧಪೀಡಿತವಾದ ಗಡಿಭಾಗದಲ್ಲಿ 1.36 ಲಕ್ಷಕ್ಕೂ ಅಧಿಕ ಮಂದಿಯನ್ನು ತೆರವುಗೊಳಿಸಿರುವುದಾಗಿ ಕಿರ್ಗಿಝ್‌ಸ್ತಾನದ ತುರ್ತುಸ್ಥಿತಿ ಸಚಿವಾಲಯ ತಿಳಿಸಿದೆ.

  ಹಿಂದಿನ ಸೋವಿಯತ್ ಒಕ್ಕೂಟದಲ್ಲಿದ್ದ ಈ ಎರಡು ನೆರೆಹೊರೆಯ ದೇಶಗಳ ನಡುವೆ ಸಂಘರ್ಷ ಭುಗಿಲೇಳಲು ಯಾವ ಅಂಶ ಕಾರಣವಾಯಿತೆಂಬುದು ತಕ್ಷಣವೇ ತಿಳಿದುಬಂದಿಲ್ಲ. ಉಭಯದೇಶಗಳ ಸೇನಾಪಡೆಗಳ ನಡುವೆ ಕದನವಿರಾಮವೇರ್ಪಡಲು ಶುಕ್ರವಾರ ಪ್ರಯತ್ನಗಳು ನಡೆದವಾದರೂ, ಸಂಜೆ ವೇಳೆಗೆ ಫಿರಂಗಿದಾಳಿ ಪುನಾರಂಭಗೊಂಡಿದ್ದಾಗಿ ವರದಿಯಾಗಿದೆ.

 ಈ ಮಧ್ಯೆ ಶುಕ್ರವಾರ ಮಧ್ಯ ರಾತ್ರಿ ಎರಡೂ ದೇಶಗಳ ಗಡಿಭದ್ರತಾ ವರಿಷ್ಠರುಗಳು ಭೇಟಿಯಾಗಿ, ಸಂಘರ್ಷವನ್ನು ಕೊನೆಗೊಳಿಸುವುದಕ್ಕಾಗಿ ಜಂಟಿ ನಿಗಾವಣೆ ಸಮಿತಿಯನ್ನು ಸೃಷ್ಟಿಸಲು ಒಪ್ಪಿಕೊಂಡಿದ್ದಾರೆ. ಆದರೆ ಸಭೆಯಿಂದಾಗಿ ಗಡಿ ಸಂಘರ್ಷದ ಮೇಲೆ ಏನಾದರೂ ಪರಿಣಾಮವಾಗಿದೆಯೇ ಎಂಬುದು ತಕ್ಷಣವೇ ತಿಳಿದುಬಂದಿಲ್ಲ.

   ಈ ಮಧ್ಯೆ ಕಿರ್ಗಿಝ್ ಗಡಿಭದ್ರತಾ ಪಡೆ ಶುಕ್ರವಾರ ಹೇಳಿಕೆಯೊಂದನ್ನು ನೀಡಿ , ತಾಜಿಕ್ ಸೇನೆಯ ದಾಳಿಯನ್ನು ತನ್ನ ಸೈನಿಕರು ಹಿಮ್ಮೆಟ್ಟಿಸುತ್ತಿದ್ದಾರೆಂದು ತಿಳಿಸಿದೆ. ‘‘ ತಾಜಿಕ್ ಕಡೆಯಿಂದ, ಕಿರ್ಗಿಝ್‌ಸ್ತಾನದ ನೆಲೆಗಳ ಮೇಲೆ ದಾಳಿ ಮುಂದುವರಿದಿದೆ. ಕೆಲವು ಪ್ರದೇಶಗಳಲ್ಲಿ ತೀವ್ರ ಕಾಳಗ ನಡೆಯುತ್ತಿದೆಯೆಂದು ಕಿರ್ಗಿಡ್ ಗಡಿ ಭದ್ರತಾ ಪಡೆ ತಿಳಿಸಿದೆ.

   ತಾಜಿಕ್‌ಸ್ತಾನದ ಸರಕಾರಿ ಸ್ವಾಮ್ಯದ ಸುದ್ದಿ ಜಾಲತಾಣವೊಂದು, ಕಿರ್ಗಿಝ್ ಪಡೆಗಳು ಗಡಿಭಾಗದ ಮೂರು ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿವೆ ಎಂದು ಆರೋಪಿಸಿದೆ.

 2021ರಲ್ಲಿ ನದಿನೀರಿನ ವಿವಾದ, ಹಾಗೂ ತಾಜಿಕಿಸ್ತಾನದಿಂದ ಗಡಿಪ್ರದೇಶದಲ್ಲಿ ಕಣ್ಗಾವಲು ಕ್ಯಾಮೆರಾಗಲ ಸ್ಥಾಪನೆಯ ಕುರಿತಾಗಿ ಉಭಯದೇಶಗಳ ನಡುವೆ ಗಡಿಭಾಗದಲ್ಲಿ ಘರ್ಷಣೆ ಭುಗಿಲೆದ್ದು ಕನಿಷ್ಠ 55 ಮಂದಿ ಸಾವನ್ನಪ್ಪಿದ್ದರು.

      ಉಕ್ರೇನ್ ಮೇಲೆ ರಶ್ಯ ಪಡೆಗಳ ಆಕ್ರಮಣ ಹಾಗೂ ಮಾಜಿ ಸೋವಿಯತ್ ಒಕ್ಕೂಟದ ಇನ್ನೆರಡು ರಾಷ್ಟ್ರಗಳಾದ ಅರ್ಮೇನಿಯಾ ಹಾಗೂ ಅಝರ್‌ಬೈಝಾನ್ ನಡುವೆ ಘರ್ಷಣೆ ನಡೆದ ಬೆನ್ನಲ್ಲೇ ಈ ಎರಡೂ ದೇಶಗಳು ಕೂಡಾ ಕಾಳಗಕ್ಕಿಳಿದಿರುವುದು ಜಾಗತಿಕವಾಗಿ ಭಾರೀ ಕಳವಳವನ್ನು ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News