PSI ನೇಮಕಾತಿ ಮರು ಪರೀಕ್ಷೆ ರದ್ದುಗೊಳಿಸಲು ಪಟ್ಟು: ಅಹೋರಾತ್ರಿ ಧರಣಿ ಆರಂಭಿಸಿದ ಆಕಾಂಕ್ಷಿಗಳು

Update: 2022-09-18 12:06 GMT
ಅಹೋರಾತ್ರಿ ಧರಣಿ ನಡೆಸುತ್ತಿರುವ ಅಭ್ಯರ್ಥಿಗಳು

ಬೆಂಗಳೂರು, ಸೆ.18: ಇತ್ತೀಚಿಗೆ ರಾಜ್ಯ ಸರಕಾರ ಹೊರಡಿಸಿರುವ ಪಿಎಸ್ಸೈ ನೇಮಕಾತಿ ಮರು ಪರೀಕ್ಷೆ ಆದೇಶ ಹಿಂಪಡೆಯಬೇಕು ಹಾಗೂ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನೀಡಬೇಕೆಂದು ಒತ್ತಾಯಿಸಿ ಇಂದಿನಿಂದ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.

ರವಿವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿರುವ  ನೂರಾರು ಅಭ್ಯರ್ಥಿಗಳು, ಪರೀಕ್ಷಾ ಪ್ರಕ್ರಿಯೆಯಲ್ಲಿ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಸರಕಾರ ಮರುಪರೀಕ್ಷೆಗೆ ಆದೇಶ ನೀಡಿದೆ.ಆದರೆ, ಇದು ಒಳ್ಳೆಯ ಕ್ರಮವಲ್ಲ. ಇದರಿಂದ ಪ್ರಾಮಾಣಿಕ ಆಕಾಂಕ್ಷಿಗಳಿಗೆ ಭಾರಿ ಅನ್ಯಾಯವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಇಂತಹ ಆದೇಶ ಸಮಂಜಸವಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ನಾವು ಬಡ ಕುಟುಂಬದವರು, ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ. ಸರಕಾರ ನಮಗೆ ಅನ್ಯಾಯ ಮಾಡಬಾರದು ಎಂದು ಧರಣಿ ನಿರತ ಅಭ್ಯರ್ಥಿಗಳು ಒತ್ತಾಯಿಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಆಕಾಂಕ್ಷಿ ಲಕ್ಷ್ಮೀಪುರ ವೆಂಕಟೇಶ್, ಈ ಪರೀಕ್ಷೆಗಾಗಿ ಐದಾರು ವರ್ಷಗಳಿಂದ ತಯಾರಿ ಮಾಡಿದ್ದೇವೆ. ಕೆಲಸ ಕಾರ್ಯಗಳನ್ನು ಬಿಟ್ಟು, ಹಗಲು ರಾತ್ರಿ ಎನ್ನದೆ ಶ್ರಮ ಹಾಕಿ ಉತ್ತೀರ್ಣರಾಗಿದ್ದೇವೆ. ಈಗ ನಮಗೆ ಈ ಕೆಲಸ ಸಿಗದಿದ್ದರೆ ನಮ್ಮ ವಯೋಮಿತಿ ದಾಟಲಿದ್ದು, ನಮ್ಮ ಪರಿಶ್ರಮವೆಲ್ಲ ವ್ಯರ್ಥವಾಗುತ್ತದೆ. ಬೇರೆಯವರು ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಎಂದು ಪ್ರಶ್ನಿಸಿದರು.

ಪಿಎಸ್ಸೈ ನೇಮಕಾತಿ ಪರೀಕ್ಷೆಗೆಂದು ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದೇವೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಬೇಡಿ. ನೇಮಕಾತಿ ಆದೇಶ ನೀಡಿ. ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಅಭ್ಯರ್ಥಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಇನ್ನೂ, 500ಕ್ಕೂ ಹೆಚ್ಚು ಪಿಎಸ್ಸೈ ಆಕಾಂಕ್ಷಿಗಳು ಇಂದಿನಿಂದ ಫ್ರೀಡಂ ಪಾರ್ಕ್‍ನಲ್ಲಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದು, ಮರುಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News