‘ಮತಾಂತರ ನಿಷೇಧ ವಿಧೇಯಕ'ಕ್ಕೆ ಅಂಕಿತ ಬೇಡ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಮನವಿ

Update: 2022-09-18 12:34 GMT
 ಥಾವರ್ ಚಂದ್ ಗೆಹ್ಲೋಟ್ - ರಾಜ್ಯಪಾಲರು

ಬೆಂಗಳೂರು, ಸೆ. 18: ‘ಪ್ರತಿಪಕ್ಷಗಳ ವಿರೋಧದ ಮಧ್ಯೆ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021' ಅನ್ನು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮನೋಭಾವಕ್ಕೆ ವಿರುದ್ಧವಾಗಿ ರಾಜ್ಯ ಸರಕಾರ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಪಡೆದಿದ್ದು, ಆ ವಿಧೇಯಕಕ್ಕೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು' ಎಂದು ಫರ್ಡಿನ್ಯಾಂಡ್ ಕಿಟಲ್ ಫೌಂಡೇಷನ್ ಮನವಿ ಮಾಡಿದೆ.

ಈ ಸಂಬಂಧ ರವಿವಾರ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿರುವ ಫೌಂಡೇಷನ್ ಅಧ್ಯಕ್ಷ ಅಥೋಣಿ ವಿಕ್ರಮ್,‘ಸಂವಿಧಾನವು ತನ್ನ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೀಡಿದೆ ಮತ್ತು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನ/ಆಕೆಯ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಆದರೆ, ರಾಜ್ಯ ಸರಕಾರ ಜಾರಿಗೊಳಿಸಲು ಮುಂದಾಗಿರುವ ಕಾನೂನು ಧಾರ್ಮಿಕ ಆಚರಣೆ ಮಾಡುವವರಲ್ಲಿ ಭಯ ಹುಟ್ಟಿಸಿ, ನೈತಿಕ ಪೊಲೀಸ್‍ಗಿರಿಗೆಅವಕಾಶ ಕಲ್ಪಿಸಲಿದೆ' ಎಂದು ದೂರಿದ್ದಾರೆ.

‘ಯಾವುದೆ ಒಬ್ಬ ವ್ಯಕ್ತಿಯು ತನ್ನ ಧರ್ಮವನ್ನು ಬದಲಾಯಿಸಲು ಖಾಸಗಿ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬೇಕು. ಹೀಗೆ ಮಾಡುವುದು ಸಂವಿಧಾನದ 21ನೆ ವಿಧಿ ಅಡಿಯಲ್ಲಿ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತೆ ಆಗುತ್ತದೆ. ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ.ಬಲವಂತದ ಮತಾಂತರ ನಿಷೇಧಿಸಿ 9 ರಾಜ್ಯಗಳಲ್ಲಿ ಕಾನೂನು ಜಾರಿಗೊಳಿಸಿದ್ದರೂ, ನಾಲ್ಕು ರಾಜ್ಯಗಳಲ್ಲಿ ಕೋರ್ಟ್ ತಡೆ ನೀಡಿದೆ. ಹೀಗಾಗಿ ಜನವಿರೋಧಿ ಮಸೂದೆಗೆ ಸಹಿ ಹಾಕಬಾರದು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News