ಬಿಜೆಪಿ ಅಧಿಕಾರದಲ್ಲಿದ್ದರೂ ಅಡಕೆ ಹಳದಿ ರೋಗಕ್ಕೆ ಪರಿಹಾರ ಕಾಣದೇ ಇರುವುದು ದೊಡ್ಡ ವೈಫಲ್ಯ: ಮಾಜಿ ಸಿಎಂ ಸದಾನಂದ ಗೌಡ

Update: 2022-09-18 16:04 GMT

ಸುಳ್ಯ, ಸೆ. 18: ಬಿಜೆಪಿ ಅಧಿಕಾರದಲ್ಲಿ ಇದ್ದರೂ ಈ ಭಾಗದ ಕೃಷಿಕರ ಬಹು ದೊಡ್ಡ ಸಮಸ್ಯೆಯಾದ ಅಡಕೆ ಹಳದಿ ರೋಗಕ್ಕೆ ಪರಿಹಾರ ಕಾಣದೇ ಇರುವುದು ಹಾಗು ಈ ಭಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟಯರ್ ಫ್ಯಾಕ್ಟರಿ ಅನುಷ್ಠಾನ ಆಗದೇ ಇದ್ದುದು ಅತ್ಯಂತ ದೊಡ್ಡ ವೈಫಲ್ಯವಾಗಿದೆ ಎಂದು ಮಾಜಿ ಸಿಎಂ ಹಾಗು ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ದೇವರ ಗುಂಡಿಯ ಅವರ ಮನೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಡಕೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದರೂ ಏನೂ ಆಗಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 25 ಕೋಟಿ ರೂ. ವಿಶೇಷ ಅನುದಾನ ಇರಿಸಿದ್ದರೂ ಅದು ಸಮರ್ಪಕವಾಗಿ ವಿನಿಯೋಗ ಆಗಿಲ್ಲ. ಇದು ದೊಡ್ಡ ವೈಫಲ್ಯವೇ ಆಗಿದೆ. ಅಡಕೆಗೆ ಕೆಜಿಗೆ 30 ರೂ. ಆಗಿದ್ದ ಸಂದರ್ಭದಲ್ಲಿ ಸಂಪಾಜೆಯಿಂದ ಮಂಗಳೂರುವರೆಗೆ ಪಾದಯಾತ್ರೆ ಸೇರಿದಂತೆ ಅಡಕೆ ಕೃಷಿಕರ ಪರವಾಗಿ ದೊಡ್ಡ ಹೋರಾಟವನ್ನೇ ನಡೆಸಿದ್ದೇವೆ. ಅದರ ಪರಿಣಾಮವಾಗಿ ಬೆಲೆ ಏರಿಕೆ, ಬೆಂಬಲ ಬೆಂಬಲ ದೊರೆತಿತ್ತು. ಅಡಕೆಯ ಬೆಲೆ ಏರಿಕೆ ಮಾಡಲು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅಡಕೆ, ಕಾಫಿ ಬೆಲೆಯಲ್ಲಿ ಏರಿಕೆ ಉಂಟಾದರೂ, ಹಲವು ಕ್ರಮಗಳನ್ನು ಕೈಗೊಂಡರೂ ರಬ್ಬರ್ ಬೆಲೆ ಏರಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಈ ಭಾಗದಲ್ಲಿ ಬೆಳೆಯುವ ರಬ್ಬರಿಗೆ ಉತ್ತಮ ಧಾರಣೆ ಹಾಗು ಮೌಲ್ಯ ದೊರೆಯಬೇಕು ಎಂಬ ದೃಷ್ಠಿಯಿಂದ ತಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸುಳ್ಯದಲ್ಲಿ ಒಂದು ಟಯರ್ ಫ್ಯಾಕ್ಟರಿ ಸ್ಥಾಪನೆ ಮಾಡಬೇಕು ಎಂದು ಯೋಜನೆ ರೂಪಿಸಿದ್ದೆ. ಆದರೆ ತನ್ನ 11 ತಿಂಗಳ ಅವಧಿ ಮುಗಿದ ಬಳಿಕ ಅದಕ್ಕೆ ವೇಗ ಸಿಗದೆ ನೆನೆಗುದಿಗೆ ಬಿದ್ದು ಹಿನ್ನಡೆಯಾಯಿತು ಎಂದು ಸದಾನಂದ ಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News