ಕೆಂಪಣ್ಣ ಸಹಿತ18 ಮಂದಿ ವಿರುದ್ಧ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಸಚಿವ ಮುನಿರತ್ನ

Update: 2022-09-19 07:17 GMT

ಬೆಂಗಳೂರು, ಸೆ.19: ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿನಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಮಾಡಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ 18 ಮಂದಿಯ ವಿರುದ್ಧ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ತೋಟಗಾರಿಕೆ ಸಚಿವ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿ.ಮುನಿರತ್ನ(V.Munirathna) ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಕಮಿಷನ್ ಪಡೆಯುತ್ತಿದ್ದಾರೆ ಎಂದು ಕೆಂಪಣ್ಣ ಮಾಡಿರುವ ಆರೋಪದಿಂದ ತನಗೆ ಕೆಟ್ಟ ಹೆಸರು ಬಂದಿದೆ. ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೊಡಬೇಕು. ಇಲ್ಲದಿದ್ದರೆ, ಕಾನೂನು ರೀತಿ ಕ್ರಮ ಎದುರಿಸಬೇಕು ಎಂದರು.

ಗುತ್ತಿಗೆದಾರರ ಸಂಘದವರು ಕಳೆದ ಒಂದು ವರ್ಷದಿಂದ ರಾಜ್ಯ ಸರಕಾರ ಹಾಗೂ ಸಚಿವರ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೆಂಪಣ್ಣ ಅವರನ್ನು ಕರೆದು ಚರ್ಚೆ ಮಾಡಿದ್ದರು. ಕಮಿಷನ್ ಸಂಬಂಧಿತ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ನೀಡುವಂತೆ ತಿಳಿಸಿದ್ದರು. ಆದರೂ, ಕೆಂಪಣ್ಣ ತಮ್ಮ ಆರೋಪಗಳನ್ನು ಮುಂದುವರೆಸಿದ್ದಾರೆ ಎಂದು ಮುನಿರತ್ನ ದೂರಿದರು.

ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ತನ್ನ ವಿರುದ್ಧ ಆಪಾದನೆಗಳನ್ನು ಮಾಡಿದ್ದಾರೆ. ಈ ಹಿಂದೆಯೆ ತಾನು ದಿಲ್ಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಅವರು ಮಾಡಿರುವ ಆಪಾದನೆಗಳಿಗೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು, ಅಥವಾ ಕ್ಷಮೆ ಕೋರಬೇಕು. ಇಲ್ಲದಿದ್ದರೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದೆ ಎಂದು ಅವರು ಹೇಳಿದರು.

ಅವರು ಮಾಡುತ್ತಿರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸುವಂತೆ ಹೇಳಿ ಏಳು ದಿನಗಳ ಕಾಲಾವಕಾಶ ನೀಡಿದ್ದೆ. ಆ.29ರಂದು ಅವರಿಗೆ ನೋಟಿಸ್ ಕಳುಹಿಸಿದ್ದೆ, ಅವರಿಂದ ಯಾವುದೆ ಪ್ರತಿಕ್ರಿಯೆಯೂ ಬಂದಿಲ್ಲ, ಲೋಕಾಯುಕ್ತಕ್ಕೆ ದಾಖಲೆಗಳನ್ನು ಸಲ್ಲಿಸಿಲ್ಲ. ಇದೀಗ, ಕೆಂಪಣ್ಣ ಸೇರಿದಂತೆ 18 ಜನರ ವಿರುದ್ಧ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದೆ. ನಾಲ್ಕು ತಿಂಗಳಲ್ಲಿ ಈ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಕೋರಿ ರಿಟ್ ಅರ್ಜಿಯನ್ನೂ ಹಾಕಲಾಗಿದೆ ಎಂದು ಮುನಿರತ್ನ ತಿಳಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರ ಹಾಗೂ ಸಚಿವರ ವಿರುದ್ಧ ಸದನದಲ್ಲಿ ದಾಖಲೆಗಳನ್ನು ಇಟ್ಟು ಮಾತನಾಡಿದರೆ ಅವರ ಗೌರವ ಹೆಚ್ಚಾಗುತ್ತದೆ. ಕಾಂಗ್ರೆಸ್‌ನವರ ಬಳಿ ಯಾವುದೆ ದಾಖಲಾತಿಗಳು ಇಲ್ಲ. ಸುಖಾಸುಮ್ಮನೆ ಆರೋಪಗಳನ್ನು ಮಾಡಿ ಪಲಾಯನ ಮಾಡಿದರೆ ಅವರ ಗೌರವವೇ ಹಾಳಾಗುತ್ತದೆ. ನನ್ನ ವಿರುದ್ಧದ ಆರೋಪಗಳು ಸಾಬೀತಾದಲ್ಲಿ ನಾನು ಯಾವುದೆ ಶಿಕ್ಷೆಯನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News