ಕ್ರಿಮಿನಲ್ ಯಾವತ್ತಾದರೂ ಕ್ರಿಮಿನಲ್‌ಗಳೇ, ಅವರಿಗೆ ಜಾತಿ, ಧರ್ಮವಿಲ್ಲ: ಪೊಲೀಸ್ ಆಯುಕ್ತ ಶಶಿಕುಮಾರ್

Update: 2022-09-19 10:45 GMT

ಮಂಗಳೂರು, 19: ಕ್ರಿಮಿನಲ್‌ಗಳಿಗೆ ಯಾವುದೇ ಜಾತಿ, ಧರ್ಮ ಇರುವುದಿಲ್ಲ ಎನ್ನುವುದನ್ನು ಎಲ್ಲ ಜಾತಿ, ಧರ್ಮದವರು ಅರ್ಥ ಮಾಡಿಕೊಳ್ಳಬೇಕು. ಕ್ರಿಮಿನಲ್ ಯಾವತ್ತಾದರೂ ಕ್ರಿಮಿನಲ್‌ಗಳೇ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಉಳ್ಳಾಲ ವ್ಯಾಪ್ತಿಯಲ್ಲಿ ಮೀನು ವ್ಯಾಪಾರದ ಹಣದ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಜಾಲ್ ನಿವಾಸಿ ತಲ್ಲತ್ ಯಾನೆ ತಲ್ಹತ್ (35) ಬಗ್ಗೆ ಸುದ್ದಿಗಾರ ಜೊತೆ ಪ್ರತಿಕ್ರಿಯಿಸಿದ ಕಮಿಷನರ್, ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ದಾನ, ಧರ್ಮ, ರಕ್ತದಾನ ಮೂಲಕ ಸಮಾಜ ಸೇವೆ ಸಭ್ಯತೆರಂತೆ ವರ್ತಿಸಿದರೆ ಪ್ರಯೋಜನವಿಲ್ಲ ಎಂದರು.

ಬಜಾಲ್ ನಿವಾಸಿ ತಲ್ಹತ್ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ ನಗರ ಪೊಲೀಸ್ ಕಮಿನಷರೇಟ್ ವ್ಯಾಪ್ತಿಯಲ್ಲಿ 30ಕ್ಕೂ ಅಧಿಕ ಪ್ರಕರಣಗಳಿವೆ. ಆರೋಪಿ ವಿರುದ್ಧ ಕಂಕನಾಡಿ, ಉಳ್ಳಾಲ, ಕೋಣಾಜೆ, ಬರ್ಕೆ ಠಾಣಾ ವ್ಯಾಪ್ತಿಯಲ್ಲಿ  ಕೇಸು ದಾಖಲಾಗಿದೆ. ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಕೊಲೆ ಪ್ರಕರಣ ದಾಖಲಾಗಿದೆ ಎಂದರು.

ಆರೋಪಿ ತಲ್ಹತ್ ನಗರದ ಅಡ್ಯಾರ್, ಕಣ್ಣೂರು, ಬಜಾಲ್, ಬಂದರ್, ಉಳ್ಳಾಲ, ದೇರಳಕಟ್ಟೆ, ಫರಂಗಿಪೇಟೆ ವ್ಯಾಪ್ತಿಯಲ್ಲಿ 60ಕ್ಕೂ ಅಧಿಕ ಮಂದಿಯ ಯುವಕರ ಗ್ಯಾಂಗ್ ಕಟ್ಟಿಕೊಂಡು ಕ್ರಿಮಿನಲ್ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈತನ ಸಹಚರರ ಮೇಲೂ ನಿಗಾ ಇರಿಸಲಾಗಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ಉಳ್ಳಾಲ ಹಲ್ಲೆ ಪ್ರಕರಣದಲ್ಲಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ ನೌಫಲ್ ವಿರುದ್ಧ 15, ಸಿದ್ದೀಕ್ ವಿರುದ್ಧ ಏಳು ಪ್ರಕರಣ ದಾಖಲಾಗಿದೆ. ತಲ್ಹತ್ ಗೆ ಮುಂಬೈ, ಕೇರಳದ ಮಂಜೇಶ್ವರದ ಕ್ರಿಮಿನಲ್‌ಗಳ ಜತೆಯೂ ಸಂಪರ್ಕವಿರುವ ಮಾಹಿತಿ ಲಭಿಸಿದ್ದು, ಆ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.

 ರಾಬಿನ್‌ಹುಡ್ ಕಲ್ಚರ್ ನಮ್ಮಲ್ಲಿಲ್ಲ:

ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿ ಶೋಕಿಗಾಗಿ ಸಮಾಜ ಸೇವೆ ಮಾಡುವ ರಾಬಿನ್ ಹುಡ್ ಕಲ್ಚರ್ ನಮ್ಮಲ್ಲಿ ನಡೆಯಲ್ಲ.

ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ಕೆಲವರು ಅಪರಾಧ ಮಾಡಿದ್ದಂತಹ ಸಂದರ್ಭದಲ್ಲಿ ಜಾತಿ, ಧರ್ಮದ ಸಹಾಯ ಪಡೆದು ರಕ್ಷಣೆ ಪಡೆದುಕೊಳ್ಳುತ್ತಾರೆ. ಆರೋಪಿ ತಲ್ಹತ್  ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಕೋವಿಡ್ ಅವಧಿಯಲ್ಲಿ ಕಿಟ್ ವಿತರಣೆ, ರಕ್ತದಾನ ಮೂಲಕ ಸಮಾಜ ಸೇವೆಯ ಫೋಸು ನೀಡಿದ್ದಾನೆ. ಆದರೆ ಯಾವ ಸೇವೆ ಮಾಡಿದರೂ ಆತನ ಕ್ರಿಮಿನಲ್ ಮನಸ್ಥಿತಿ ಮಾತ್ರ ಬದಲಾಗಿಲ್ಲ ಎಂದು ಕಮಿಷನರ್  ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News