ಜಪಾನ್ ಚಂಡಮಾರುತ :ಹಲವೆಡೆ ಪ್ರವಾಹ, 60 ಮಂದಿಗೆ ಗಾಯ

Update: 2022-09-19 16:55 GMT

ಟೋಕಿಯೊ, ಸೆ.19: ನೈಋತ್ಯ  ಜಪಾನ್‍ಗೆ ಅಪ್ಪಳಿಸಿರುವ ಪ್ರಬಲ ನ್ಯಾನ್ಮಡೋಲ್ ಚಂಡಮಾರುತದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿದೆ. ಭೀಕರ ಬಿರುಗಾಳಿಯೊಂದಿಗೆ ಹಲವೆಡೆ ವ್ಯಾಪಕ ನಾಶ ನಷ್ಟಕ್ಕೆ ಕಾರಣಾಗಿರುವ ಚಂಡಮಾರುತದಿಂದ ಕನಿಷ್ಟ 60 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಚಂಡಮಾರುತ ಈಗ ರಾಜಧಾನಿ ಟೋಕಿಯೋದತ್ತ ಸಾಗುತ್ತಿದ್ದು ಮಂಗಳವಾರ ರಾಜಧಾನಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ರವಿವಾರ ಕ್ಯುಷು ಪ್ರದೇಶಕ್ಕೆ ಅಪ್ಪಳಿಸಿದ್ದ ಚಂಡಮಾರುತದಿಂದ ನದಿಯ ನೀರು ಉಕ್ಕೇರಿ ಹರಿದಿದ್ದು ಪ್ರಮುಖ ರಸ್ತೆಗಳೆಲ್ಲಾ ಜಲಾವೃತಗೊಂಡಿದೆ. ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಗಂಟೆಗೆ 108 ಕಿ.ಮೀ ವೇಗದ ಗಾಳಿ ಬೀಸುತ್ತಿದ್ದು ಇದು ಕ್ರಮೇಣ ಗಂಟೆಗೆ 162 ಕಿ.ಮೀ ವೇಗ ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ಜಪಾನ್‍ನ ಹವಾಮಾನ ಇಲಾಖೆ ಹೇಳಿದೆ.

ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಬುಲೆಟ್ ಟ್ರೈನ್ ಹಾಗೂ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ. ನದಿಗಳ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಮತ್ತು ಭೂಕುಸಿತದ  ಬಗ್ಗೆ ಎಚ್ಚ ರಿಕೆ ರವಾನಿಸಲಾಗಿದೆ. ಹಲವೆಡೆ ಅಂಗಡಿ, ವ್ಯಾಪಾರ ಸಂಸ್ಥೆಗಳನ್ನು ಮುಚ್ಚಲಾಗಿದ್ದು ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News