ಮಧ್ಯಪ್ರದೇಶ: ಬಾಲಕಿಯ ಸಾಮೂಹಿಕ ಅತ್ಯಾಚಾರ; ಮೂವರು ಆರೋಪಿಗಳ ಮನೆ ನೆಲಸಮ

Update: 2022-09-19 18:24 GMT

ಭೋಪಾಲ (ಮ.ಪ್ರ), ಸೆ. 19: ಆರು ಮಂದಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಥಳಿಸಿದ ಘಟನೆ ರೇವಾ ಜಿಲ್ಲೆಯಲ್ಲಿ  ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಬಾಲಕಿ ಗೆಳೆಯರೊಂದಿಗೆ ಶನಿವಾರ ಅಪರಾಹ್ನ ದೇವಾಲಯಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿದಂತೆ 6 ಮಂದಿ ಬಾಲಕಿಯನ್ನು ನೀರಿನ ತಾಣದ ಸಮೀಪ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅನಂತರ ಥಳಿಸಿದ್ದಾರೆ. ಮೊಬೈಲ್ ಹಾಗೂ ಕಾಲಿನ ಕಡಗವನ್ನು ಲೂಟಿ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಸೋಂಕಾರ್ ಅವರು ತಿಳಿಸಿದ್ದಾರೆ.

ಹಲ್ಲೆಯ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆಗೈಯಲಾಗುವುದು ಎಂದು ಆರೋಪಿಗಳು ಬಾಲಕಿ ಹಾಗೂ ಆಕೆಯ ಗೆಳೆಯರಿಗೆ ಬೆದರಿಕೆ ಒಡ್ಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.   ಇತರರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.  ಈ ನಡುವೆ ರೇವಾ ಜಿಲ್ಲೆಯ ಆಡಳಿತ ಬಂಧಿತರ ಮನೆಗಳನ್ನು ನೆಲಸಮಗೊಳಿಸಿದೆ. ‘‘ಅಪರಾಧದಲ್ಲಿ ಭಾಗಿಯಾದ ಇತರ ಮೂವರ ಮನೆಗಳನ್ನು ಕೂಡ ಇದೇ ರೀತಿ ನೆಲಸಮಗೊಳಿಸಲಾಗುವುದು’’ ಎಂದು ಅನಾಮಿಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಟ್ಟಡಗಳನ್ನು ಅನಿಧಿಕೃತವಾಗಿ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News