PSI ನೇಮಕಾತಿ ಹಗರಣ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾದ ಈ.ಡಿ

Update: 2022-09-21 05:19 GMT

ಬೆಂಗಳೂರು: ರಾಜ್ಯ ಸರ್ಕಾರವನ್ನು ಮತ್ತು ಗೃಹ ಸಚಿವರನ್ನು ತೀವ್ರ ಪೇಚಿಗೆ ಸಿಲುಕಿಸಿರುವ 545 ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣಕ್ಕೆ ಬಹು ದೊಡ್ಡ ತಿರುವು ಸಿಕ್ಕಿದ್ದು, ಜಾರಿ ನಿರ್ದೇಶನಾಲಯ ಈ ಕುರಿತು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ. 

ಅಕ್ರಮ ಹಣ ವರ್ಗಾವಣೆ ನಿರ್ಬಂಧಕ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಪ್ರಕರಣದ ತನಿಖೆ ನಡೆಸುವ ಅಗತ್ಯ ಇರುವುದರಿಂದ ಜಾರಿ ನಿರ್ದೇಶನಾಲಯ ECIR/BGZO/68/2022  ಅಡಿಯಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿದ್ದು ಆರೋಪಿಗಳ ವಿಚಾರಣೆಗೆ ಮುಂದಾಗಿದೆ.

ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಅಕ್ರಮವಾಗಿ ನೇಮಕಾತಿ ಆಗಿರುವ ಆರೋಪಿಗಳಿಂದ ತಲಾ 30 ಲಕ್ಷದಿಂದ ಒಂದು ಕೋಟಿವರೆಗೂ ಹಣ ವಸೂಲಿ ಮಾಡಲಾಗಿದೆ ಎನ್ನುವ ಸಂಗತಿಗಳು ಸಿಐಡಿ ತನಿಖೆಯಿಂದ ಹೊರಗೆ ಬಂದಿವೆ. ಇಡೀ ಪ್ರಕರಣವನ್ನು ಗಂಭೀರವಾಗಿ ಗಮನಿಸಿರುವ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಶೈಲೇಂದ್ರ ಕುಮಾರ್ ಚೌಬೆ ಅವರು ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

ಸದ್ಯ ಸಿಐಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ವಶದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗಳೂ ಸೇರಿದಂತೆ 10 ಕ್ಕೂ ಹೆಚ್ಚು ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ ಫಸ್ಟ್ ಎಸಿಎಂಎಂ ನ್ಯಾಯಾಲಯದ ಮೊರೆ ಹೋಗಿದೆ. ಒಂದೆರಡು ದಿನಗಳಲ್ಲೇ ನ್ಯಾಯಾಲಯದ ಆದೇಶ ಹೊರ ಬೀಳಲಿದ್ದು ಇಡಿ ವಿಚಾರಣೆಗೂ ಬಂಧಿತ ಆರೋಪಿಗಳು ಒಳಪಡುವ ಸಾಧ್ಯತೆಗಳು ಹೆಚ್ಚಾಗಿವೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ಕೇಸು ದಾಖಲಾಗಿಲ್ಲ ಏಕೆ ?

ವರ್ಷದ ಹಿಂದೆ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದ್ದ ಬಿಟ್ ಕಾಯಿನ್ ಪ್ರಕರಣದಲ್ಲೂ ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಿತವಾಗಿ ಪ್ರಕರಣದ ತನಿಖೆಗೆ ಮುಂದಾಗಿತ್ತು. ಆಗಲೂ ಸರ್ಕಾರ ಸದರಿ ಪ್ರಕರಣವನ್ನು ಇಡಿಗೆ ವಹಿಸಿರಲಿಲ್ಲ. ಪಿಎಸ್‍ಐ ಅಕ್ರಮ ನೇಮಕಾತಿ ಹನಗರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೇ ಬಂಧನಕ್ಕೆ ಒಳಗಾಗಿರುವುದು ಮತ್ತು ಕೋಟಿಗಟ್ಟಲೆ ಹಣ ವರ್ಗಾವಣೆ ಆಗಿರುವುದು ಸಿಐಡಿ ತನಿಖೆಯಿಂದ ಹೊರಗೆ ಬಂದಿದ್ದರೂ ಸರ್ಕಾರ ಇದುವರೆಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಅಲ್ಲದೆ ಇದುವರೆಗೂ ಸರ್ಕಾರ ಈ ಬಗ್ಗೆ ಇಡಿಗೂ ಅಧಿಕೃತವಾಗಿ ಪತ್ರ ಬರೆದಿಲ್ಲ. ಪ್ರಕರಣದ ತನಿಖೆಯನ್ನೂ ಇಡಿಗೆ ವಹಿಸಿಲ್ಲ. ಹೀಗಾಗಿ ಇಡಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವಂತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 ► ಈ.ಡಿ ಮನವಿ ಏನು?

ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಮತ್ತು ಇದುವರೆಗೂ ತನಿಖೆಯಿಂದ ಹೊರಗೆ ಬಂದಿರುವ ಸಂಗತಿಗಳನ್ನು ಗಮನಿಸಿದರೆ ಮೇಲು ನೋಟಕ್ಕೆ ಇದೊಂದು ಅಕ್ರಮ ಹಣ ವರ್ಗಾವಣೆ ನಿರ್ಬಂಧಕ ಕಾಯ್ದೆಯ ಕಲಂ 3 ಮತ್ತು 4 ರ ಅಡಿಯಲ್ಲಿ ತನಿಖೆಗೆ ಒಳಪಡಬೇಕಾದ ಪ್ರಕರಣ ಎನ್ನಿಸುತ್ತಿದೆ. ನೇಮಕಾತಿ ವಿಭಾಗದಲ್ಲಿದ್ದವರೇ, ಹಿರಿಯ ಪೊಲೀಸ್ ಅಧಿಕಾರಿಗಳೂ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಇವರೆಲ್ಲರನ್ನೂ ಇಡಿ ದಾಖಲಿಸಿಕೊಂಡಿರುವ ಪ್ರಕರಣದ ಅಡಿಯಲ್ಲಿ ತನಿಖೆ ನಡೆಸಬೇಕಾಗಿದೆ. ಹೀಗಾಗಿ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡಿ ಎಂದು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಈ.ಡಿ ಮೊದಲ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ಪ್ರತಿ 'ವಾರ್ತಾಭಾರತಿ' ಪತ್ರಿಕೆಗೆ ಲಭ್ಯವಾಗಿದೆ. ಇದರಲ್ಲಿ ಜಾರಿ ನಿರ್ದೇಶನಾಲಯ ಇಡಿ ಪ್ರಕರಣದ ಗಂಭೀರತೆಯನ್ನು ವಿವರಿಸಿರುವುದು ಮಾತ್ರವಲ್ಲದೆ ಸಾರ್ವಜನಿಕ ಹಿತಾಸಕ್ತಿಯಿಂದ ಇದೊಂದು ಪಿಎಂಎಲ್‍ಎ ಕಾಯ್ದೆ ಅಡಿಯಲ್ಲಿ ತನಿಖೆಗೆ ಒಳಪಡಬೇಕಾಗಿದೆ ಎಂದೂ ಅಭಿಪ್ರಾಯ ಪಟ್ಟಿದೆ.

ಈಗಾಗಲೇ ಈ.ಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದೆ. ಆರೋಪಿ ಪರ ವಕೀಲರುಗಳು ಇಡಿ ಅರ್ಜಿಗೆ ತಕರಾರು ಸಲ್ಲಿಸಿದ್ದಾರೆ. ಒಂದೆರಡು ದಿನಗಳಲ್ಲಿ ನ್ಯಾಯಾಲಯ ತನ್ನ ತೀರ್ಪು ನೀಡಲಿದೆ.

ಆದರೆ, ಸರ್ಕಾರ ಇದುವರೆಗೂ ತಾನಾಗೇ ಪ್ರಕರಣವನ್ನು ಇಡಿಗೆ ಏಕೆ ವಹಿಸಲಿಲ್ಲ ಎನ್ನುವುದು ಮಾತ್ರ ಬಹಳ ಆಶ್ಚರ್ಯದ ಸಂಗತಿಯಾಗಿದೆ. 

ಪಿಎಸ್‍ಐ ನೇಮಕಾತಿ ಹಗರಣದ ಬಗ್ಗೆ ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಮಯ್ಯ ಮತ್ತು ಶಾಸಕ ಪ್ರಿಯಾಂಕ್ ಖರ್ಗೆ ಅವರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರವನ್ನು ಶ್ಲಾಘಿಸಿದ್ದರು. ಸರ್ಕಾರವೂ ಕುಮಾರಸ್ವಾಮಿ ಅವರನ್ನು ಶ್ಲಾಘಿಸಿತ್ತು. 

ಇದನ್ನೂ ಓದಿ: ಪಿಎಸ್ಸೈ ಹಗರಣದಲ್ಲಿ ಭಾಗಿ ಆರೋಪ: ಮೈಸೂರು ನಗರ ಎನ್.ಆರ್. ಸಂಚಾರ ವಿಭಾಗದ ಪಿಎಸ್ಸೈ ಅಮಾನತು

ಆರೋಪಿಗಳ ನೆರವಿಗೆ 8 ಎಫ್‍ಐಆರ್

ಪಿಎಸ್‍ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಎಂಟು ಎಫ್‍ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಸಿಐಡಿ ತನಿಖೆ ಮುಂದುವರೆದಿದೆ. ಆದರೆ, ಇದು ಒಂದೇ ಪ್ರಕರಣವಾಗಿದ್ದು ಬೇರೆ ಬೇರೆ ಸ್ಥಳಗಳಲ್ಲಿ ಕೃತ್ಯ ನಡೆದಿದೆ. ಒಂದೇ ಪ್ರಕರಣದಲ್ಲಿ ಹಲವು ಎಫ್‍ಐಆರ್ ಗಳು ದಾಖಲಾದರೆ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜಾಮೀನು ಸಿಗುವುದು ಬಹಳ ಸುಲಭವಾಗುತ್ತದೆ. ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ ಎನ್ನುವ ಅಭಿಪ್ರಾಯ ವಕೀಲರಿಂದ ವ್ಯಕ್ತವಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News