ಅವಿಶ್ವಾಸ ಗೊತ್ತುವಳಿ: ಅಧಿಕಾರ ಕಳೆದುಕೊಂಡ ಮಂಜನಾಡಿ ಗ್ರಾಪಂ ಅಧ್ಯಕ್ಷೆ ನಸ್ರೀನ ಇಕ್ಬಾಲ್

Update: 2022-09-22 09:31 GMT

ಕೊಣಾಜೆ, ಸೆ.22: ಮಂಜನಾಡಿ ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಸದಸ್ಯರು ಗುರುವಾರ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದು, ಮೂರನೇ ಎರಡು ಮತಗಳಿಂದ ಪಂಚಾಯತ್ ಅಧ್ಯಕ್ಷೆ ನಸ್ರೀನ ಇಕ್ಬಾಲ್ ತನ್ನ ‌ಸ್ಥಾನ ಕಳೆದುಕೊಂಡಿದ್ದಾರೆ.

ಮಂಜನಾಡಿ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 26 ಸದಸ್ಯರಿದ್ದು, ಈ ಪೈಕಿ 18 ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ ಮತ ಚಲಾಯಿಸಿದ್ದಾರೆ. ಕೇವಲ ಎಂಟು ಸದಸ್ಯರು ಮಾತ್ರ ಅವಿಶ್ವಾಸ ಗೊತ್ತುವಳಿ ನಿರ್ಣಯದ ವಿರುದ್ಧ ಮತ ಹಾಕಿದರು. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಯನ್ನು ಮೂರನೇ ಎರಡು ಬಹುಮತದೊಂದಿಗೆ ಅಂಗೀಕರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಮಧನ್ ಮೋಹನ್ ಘೋಷಿಸಿದರು.

ಇದರಿಂದ ಮಂಜನಾಡಿ ಗ್ರಾಮ ಪಂಚಾಯತ್ ನಲ್ಲಿ 19 ತಿಂಗಳು ಆಡಳಿತ ನಡೆಸಿದ ನಸ್ರೀನ ಅಧ್ಯಕ್ಷ ಹುದ್ದೆ ಕಳೆದುಕೊಂಡ ಹಿನ್ನೆಲೆಯಲ್ಲಿ  ಆಡಳಿತಕ್ಕೆ ಪೂರ್ಣ ವಿರಾಮ ಬಿದ್ದಿದೆ.

ನಸ್ರೀನ 2021ರ ಫೆಬ್ರವರಿ ತಿಂಗಳಲ್ಲಿ ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಸದಸ್ಯರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಅಧ್ಯಕ್ಷರು ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಅದು ತಾರಕಕ್ಕೇರಿ ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ತಿಂಗಳ ಹಿಂದೆ ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರೆನ್ನಲಾಗಿದೆ.


'ಮಂಜನಾಡಿ ಗ್ರಾಪಂ ಅಧ್ಯಕ್ಷೆ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಲು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಅವಿಶ್ವಾಸ ಗೊತ್ತುವಳಿ ಮಂಡನೆ ಆಗಿದೆ. 18 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆ ಪರ ಮತ ಹಾಕಿದ ಕಾರಣ ಅಧ್ಯಕ್ಷರು ಅಧಿಕಾರ ಕಳಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು'.

- ಮದನ್ ಮೋಹನ್, ಸಹಾಯಕ ಆಯುಕ್ತರು, ಜಿಲ್ಲಾ ದಂಡಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News