ಕೇವಲ ಒಂದೇ ಒಂದು ಪೋಸ್ಟರ್‌ಗೆ ರಾಜ್ಯ ಸರ್ಕಾರ ಹಾವು ತುಳಿದಂತೆ ಬೆಚ್ಚಿಬಿದ್ದಿದೆ: ದಿನೇಶ್ ಗುಂಡೂರಾವ್

Update: 2022-09-22 11:28 GMT

ಬೆಂಗಳೂರು: 'PayCM' ಪೋಸ್ಟರ್‌ಗೆ ಸಂಬಂಧಿಸಿದಂತೆ ಪೊಲೀಸರು ಕಾಂಗ್ರೆಸ್‌ ಸೋಶಿಯಲ್ ಮೀಡಿಯಾದ ಐವರನ್ನು ಬಂಧಿಸಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ BJP ಸೋಶಿಯಲ್ ಮೀಡಿಯಾದವರ ಬಂಧನವೇಕಿಲ್ಲ.? ಅವರಿಗೊಂದು‌‌ ನ್ಯಾಯ, ನಮಗೊಂದು ನ್ಯಾಯವೇ.? ಇದ್ಯಾವ ಕುರುಡು ನ್ಯಾಯ ಬೊಮ್ಮಾಯಿಯವರೆ.?' ಎಂದು ಕಾಂಗ್ರೆಸ್ ನಾಯಕ  ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. 

ಈ ಕುರಿತು ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು,' 'PayCM' ಎಂಬ ಕೇವಲ ಒಂದೇ ಒಂದು ಪೋಸ್ಟರ್‌ಗೆ ರಾಜ್ಯ ಸರ್ಕಾರ ಹಾವು ತುಳಿದಂತೆ ಬೆಚ್ಚಿಬಿದ್ದಿದೆ. BJP ಸೋಶಿಯಲ್ ಮೀಡಿಯಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಷ್ಟು ಕಾಂಗ್ರೆಸ್ ನಾಯಕರ ಮೇಲೆ ಕಪೋಲಕಲ್ಪಿತ ಸುಳ್ಳುಗಳನ್ನು ಹರಡಿ ವಿಕೃತಿ‌ ಮೆರೆದಿಲ್ಲ.? ಈಗ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುವ ನೈತಿಕತೆ BJPಯವರಿಗಿದೆಯೇ.?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''BJP ಸೋಶಿಯಲ್ ಮೀಡಿಯಾದ ವಿಕೃತಿಗೆ ನಾನು ಸೇರಿದಂತೆ ಹಲವು ಕಾಂಗ್ರೆಸಿಗರು ಬಲಿಪಶುಗಳಾಗಿದ್ದಾರೆ. ನಮ್ಮದೇ ಸರ್ಕಾರವಿದ್ದಾಗಲೂ ಕೂಡ BJP ಸೋಶಿಯಲ್ ಮೀಡಿಯಾ ಕಾಂಗ್ರೆಸ್ ನಾಯಕರ ಫೋಟೋ ವಿರೂಪಗೊಳಿಸಿ ಅಂಕೆಯಿಲ್ಲದ ವಿಕೃತಿ ಮೆರೆದಿತ್ತು‌. ಆದರೆ ಟೀಕೆ ಟಿಪ್ಪಣಿ ರಾಜಕೀಯದ ಸಹಜ ವಿದ್ಯಾಮಾನ. ಹಾಗಾಗಿ‌ ನಾವು BJPಯವರಂತೆ ಪೊಲೀಸರ ಮೊರೆ ಹೋಗಿರಲಿಲ್ಲ'' ಎಂದು ಹೇಳಿದ್ದಾರೆ. . 

'ಎದುರಾಳಿಗೆ ಕೆಸರು ಎರಚಿ, ಅವರು ನಮಗೆ ಮೊಸರು ಎರಚಲಿ ಎಂದು ಬಯಸಬಾರದು. ಇನ್ನೊಬ್ಬರ ಮೇಲೆ ಕೆಸರು ಎರಚಿದರೆ, ತಮಗೂ ಕೆಸರನ್ನೇ ಎರಚುತ್ತಾರೆ ಎಂಬ ಕಟು ಸತ್ಯವನ್ನು ಬೊಮ್ಮಾಯಿಯವರು ಅರಿಯಬೇಕು. BJP ಸೋಶಿಯಲ್ ಮೀಡಿಯಾ ಸುಳ್ಳು ಹರಡುವಾಗ ಇದೇ ಬೊಮ್ಮಾಯಿಯವರು ವಿಕೃತ ಆನಂದ ಅನುಭವಿಸಿದ್ದರು. ಈಗ ತಮಗೇ ಚುಚ್ಚಿಕೊಂಡ ಮೇಲೆ ಆ ನೋವು ಅರಿವಾಗುತ್ತಿದೆ' ಎಂದು  ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News