ಬ್ಯಾರೀಸ್ ಗ್ರೂಪ್ ನ 'ಬಿ ಜಿ ಆರ್‌ ಟಿ'ಗೆ ಸಿಐಐ ನ್ಯಾಷನಲ್ ಎನರ್ಜಿ ಲೀಡರ್ಶಿಪ್ ಅವಾರ್ಡ್

Update: 2022-09-22 12:14 GMT

ಬೆಂಗಳೂರು, ಸೆ.22: ಪ್ರತಿಷ್ಠಿತ ಬ್ಯಾರೀಸ್ ಗ್ರೂಪ್ ನ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಬ್ಯಾರೀಸ್ ಗ್ಲೋಬಲ್ ರಿಸರ್ಚ್ ಟ್ರಯಾಂಗಲ್ (ಬಿ ಜಿ ಆರ್‌ ಟಿ) 2021, 22 ಹಾಗು  23ರ ಸತತ ಮೂರು ವರ್ಷ ಸಿಐಐ ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಎನರ್ಜಿ ಮ್ಯಾನೇಜ್ಮೆಂಟ್ (ಶ್ರೇಷ್ಠ ಇಂಧನ ನಿರ್ವಹಣೆಗಾಗಿ ರಾಷ್ಟ್ರೀಯ ಪ್ರಶಸ್ತಿ) ಪಡೆದಿದ್ದು 'ನ್ಯಾಷನಲ್ ಎನರ್ಜಿ ಲೀಡರ್' ಎಂಬ ಗೌರವಕ್ಕೆ ಪಾತ್ರವಾಗಿದೆ.

ಇದೇ ಸಂದರ್ಭದಲ್ಲಿ 'ಮೋಸ್ಟ್‌ ಯೂಸ್‌ಫುಲ್‌ ಪ್ರೆಸೆಂಟೇಶನ್'‌ ಎಂಬ ಗೌರವವೂ ಬ್ಯಾರೀಸ್‌ ಪಾಲಿಗೆ ಬಂದಿದೆ.

'ಬಿ ಜಿ ಆರ್‌ ಟಿ' ಭಾರತದ ಪ್ರಪ್ರಥಮ ಲೀಡ್ ಪ್ರಮಾಣೀಕೃತ ಸಂಶೋಧನಾ ಹಾಗು ಅಭಿವೃದ್ಧಿ ಕೇಂದ್ರವಾಗಿದ್ದು ಶ್ರೇಷ್ಠ ನಿರ್ಮಾಣಕ್ಕೆ ಮಾನದಂಡ ಎಂದು ಪರಿಗಣಿಸುವಂತಹ ಯೋಜನೆಯಿದು ಎಂದು  ಉದ್ಯಮ ವಲಯ ಹಾಗು ನಿರ್ಮಾಣ ತಜ್ಞರಿಂದ ವ್ಯಾಪಕ  ಮನ್ನಣೆ ಪಡೆದಿದೆ. ದೇಶದ ವಿವಿಧೆಡೆಗಳಿಂದ ವಿದ್ಯಾರ್ಥಿಗಳು, ಆರ್ಕಿಟೆಕ್ಟ್‌ಗಳು, ನಿರ್ಮಾಣ ಸಲಹೆಗಾರರು ಹಾಗು ಡೆವಲಪರ್‌ಗಳು ಬಂದು ಭೇಟಿ ನೀಡಿ ಪರಿಸರ ಸ್ನೇಹಿ ಅತ್ಯಾಧುನಿಕ ಸುಸ್ಥಿರ ನಿರ್ಮಾಣ ಹಾಗು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳುವ ಮಾದರಿ ಯೋಜನೆಯಾಗಿ ಖ್ಯಾತಿ ಪಡೆದಿದೆ.

ಬುಧವಾರ ಹೊಸದಿಲ್ಲಿಯ ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಇಂಧನ ಸಚಿವಾಲಯದ ಬ್ಯುರೋ ಆಫ್ ಎನರ್ಜಿ ಎಫಿಷಿಯನ್ಸಿಯ ನಿರ್ದೇಶಕ ಡಾ. ಅಶೋಕ್ ಕುಮಾರ್ ಅವರು ಬ್ಯಾರೀಸ್ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕ ಮಝರ್ ಬ್ಯಾರಿ ಅವರಿಗೆ ಪ್ರಶಸ್ತಿಗಳನ್ನು  ಪ್ರದಾನ ಮಾಡಿದರು. 

ಇದು ಬ್ಯಾರೀಸ್ ಗ್ರೂಪ್ ಗೆ ಅತ್ಯಂತ ಸಂತಸ ತಂದಿದೆ. ಈ ಗೌರವವನ್ನು ನಮ್ಮ ಮಾರ್ಗದರ್ಶಕರಾದ ಐಜಿಬಿಸಿಯ ಮಾಜಿ ಅಧ್ಯಕ್ಷ ಪ್ರೇಮ್‌ ಸಿ. ಜೈನ್‌ ಹಾಗು ನಮಗೆ ಸದಾ ಸ್ಪೂರ್ತಿ ಸೆಲೆಯಾಗಿದ್ದ ಖ್ಯಾತ ಸ್ಟ್ರಕ್ಚರಲ್‌ ಕನ್ಸಲ್ಟಂಟ್‌ ಮಹೇಂದ್ರ ರಾಜ್‌ ಅವರಿಗೆ ಸಮರ್ಪಿಸುತ್ತೇವೆ. ಸುಸ್ಥಿರ ನಿರ್ಮಾಣವನ್ನು ಇನ್ನಷ್ಟು ಹೆಚ್ಚಿಸುವ ಹಾಗು ಐಜಿಬಿಸಿ ನಾಯಕತ್ವದಲ್ಲಿ ಭಾರತದಲ್ಲಿ ನಡೆಯುತ್ತಿರುವ ಪರಿಸರ ಸ್ನೇಹಿ ನಿರ್ಮಾಣ ಆಂದೋಲನವನ್ನು ಮುಂದುವರಿಸುವ ನಮ್ಮ ನಿರಂತರ ಪ್ರಯತ್ನಕ್ಕೆ ನಾವು ನಮ್ಮನ್ನು ಮತ್ತೆ ಸಮರ್ಪಿಸಿಕೊಳ್ಳುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗು ಆಡಳಿತ ನಿರ್ದೇಶಕ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರು ಪ್ರತಿಕ್ರಿಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News