ಉಪ್ಪಿನಂಗಡಿಯಲ್ಲಿ ಎನ್‍ಐಎ ದಾಳಿ

Update: 2022-09-22 14:41 GMT

ಉಪ್ಪಿನಂಗಡಿ: ಕಾನೂನು ಬಾಹಿರ ಚಟುವಟಿಕೆಯ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಉಪ್ಪಿನಂಗಡಿಯ ಲಕ್ಷ್ಮೀನಗರದಲ್ಲಿರುವ ಪಿಎಫ್‍ಐ ಮುಖಂಡ ಅಯೂಬ್ ಅಗ್ನಾಡಿಯವರ ಮನೆಗೆ ಎನ್‍ಐಎ ತಂಡ ಹಾಗೂ ಪೊಲೀಸರ ತಂಡ ಜಂಟಿ ದಾಳಿ ನಡೆಸಿ, ಪರಿಶೀಲನೆ ನಡೆಸಿತು.

ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಪಿಎಫ್‍ಐನ ಹಲವು ಮುಖಂಡರ ಮೇಲೆ ಎನ್‍ಐಎಯಲ್ಲಿ ಹಾಗೂ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅಯೂಬ್ ಅಗ್ನಾಡಿಯವರ ಮನೆಯ ಮೇಲೂ ಈ ದಾಳಿ ನಡೆದಿದೆ.

ಎನ್‍ಐಎ ತಂಡ ಹಾಗೂ ಪೊಲೀಸರ ಈ ಜಂಟಿ ದಾಳಿಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ಪಾಲ್ಗೊಂಡಿದ್ದರು.

ಸ್ಥಳದಲ್ಲಿ ಆಕ್ರೋಶ: ಎನ್‍ಐಎ ತಂಡ ಹಾಗೂ ಪೊಲೀಸರ ದಾಳಿಯ ಮಾಹಿತಿ ತಿಳಿದು ಅಯೂಬ್ ಅಗ್ನಾಡಿ ಅವರ ಮನೆಯ ಮುಂದೆ ಜಮಾಯಿಸಿದ ಪಿಎಫ್‍ಐ ಕಾರ್ಯಕರ್ತರು ಈ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ: ಪಿಎಫ್‍ಐ ನಾಯಕರ ವಿರುದ್ಧ ಎನ್‍ಐಎ ದಾಳಿಯನ್ನು ಖಂಡಿಸಿ ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿ ಪಿಎಫ್‍ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News