'PAYCM' ಪೋಸ್ಟರ್ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

Update: 2022-09-22 15:05 GMT

ಬೆಂಗಳೂರು, ಸೆ.22: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೊ ಸಮೇತ 'ಪೇಸಿಎಂ' ಎಂಬುದಾಗಿ ಪೋಸ್ಟರ್ ಅಂಟಿಸಿದ್ದ ಆರೋಪದಡಿ ಕಾಂಗ್ರೆಸ್‍ನ ಕಾರ್ಯಕರ್ತರು ಸೇರಿದಂತೆ ಐವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೇಂದ್ರ ವಿಭಾಗದ ಪೊಲೀಸರು ಗುರುವಾರ ಮುಂಜಾನೆ ನಗರದ ಹಲವು ಕಡೆ ದಾಳಿ ನಡೆಸಿ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆನಂತರ, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದಲ್ಲಿರುವ ಸಂಜಯ್ ಹಾಗೂ ಸಿದ್ದಯ್ಯ, ವಿನೋದ್, ವಿಶ್ವಮೂರ್ತಿ, ಮದನ್ ಎಂಬುವರನ್ನು ಬಂಧಿಸಿ, ನಗರದ ಎಂಟನೆ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಐವರು ಆರೋಪಿಗಳನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಎಂದು ತಿಳಿದುಬಂದಿದೆ. ಇಂದು(ಸೆ.23) ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಇನ್ನೂ, ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ನಾಯ್ಡು ಹಾಗೂ ಗಗನ್ ಎಂಬುವರನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ಆನಂತರ ಬಿಡುಗಡೆಗೊಳಿಸಿದರು. 

ನಗರದ ಹಲವು ಪ್ರದೇಶಗಳ ಬಸ್ ತಂಗುದಾಣ ಹಾಗೂ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಲಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕಾರ್ಯಕರ್ತರನ್ನು ವಶಕ್ಕೆ ಪಡೆದ ಸುದ್ದಿ ತಿಳಿಯುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮುಖಂಡರು, ಹೈಗ್ರೌಂಡ್ಸ್ ಠಾಣೆಗೆ ಭೇಟಿ ನೀಡಿದರು.

ಇದನ್ನೂ ಓದಿ: ನಾಳೆ ನಾವೇ ಶಾಸಕರು ಸೇರಿಕೊಂಡು 'PAYCM' ಪೋಸ್ಟರ್​ ಅಂಟಿಸ್ತೀವಿ: ಡಿ.ಕೆ. ಶಿವಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News