ಸುರತ್ಕಲ್ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಪರಿಶೀಲಿಸಿ ಕ್ರಮ: ಸಚಿವ ಡಾ.ಸುಧಾಕರ್

Update: 2022-09-22 17:55 GMT

ಬೆಂಗಳೂರು, ಸೆ. 22: ‘ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಡಾ.ಭರತ್‍ಶೆಟ್ಟಿ ಕೇಳಿದ ತಡೆಹಿಡಿಯಲಾದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಐಪಿಎಚ್‍ಎಸ್ ಮಾರ್ಗಸೂಚಿ ಅನ್ವಯ ಸಮತಟ್ಟು ಪ್ರದೇಶದಲ್ಲಿ 1.20 ಲಕ್ಷ ಜನಸಂಖ್ಯೆ ಇರಬೇಕು, ಗುಡ್ಡಗಾಡು ಪ್ರದೇಶದಲ್ಲಿ 80 ಸಾವಿರ ಜನಸಂಖ್ಯೆ ಇರಬೇಕು. ಆದರೆ. 2021ರ ಮಂಗಳೂರು ತಾಲೂಕಿನ ಜನಸಂಖ್ಯೆ 1.95 ಲಕ್ಷ ಇದ್ದು, ಮಾರ್ಗಸೂಚಿ ಅನ್ವಯ ಈಗಾಗಲೇ ಎರಡು ಸಮುದಾಯ ಆರೋಗ್ಯ ಕೇಂದ್ರಗಳು ಮೂಲ್ಕಿ ಮತ್ತು ಮೂಡುಬಿದ್ರೆಯಲ್ಲಿವೆ. ಹೀಗಾಗಿ ಯಾವುದೇ ಪ್ರಸ್ತಾವನೆ ಇಲ್ಲ' ಎಂದರು.

ಬಳಿಕ ಇದಕ್ಕೆ ಆಕ್ಷೇಪಿಸಿದ ಭರತ್ ಶೆಟ್ಟಿ ಮತ್ತು ವಿಪಕ್ಷ ಉಪನಾಯಕ ಯು.ಟಿ.ಖಾದರ್, ‘ಸುರತ್ಕಲ್ ಈ ಹಿಂದೆ ಮಂಗಳೂರು ತಾಲೂಕಿನ ವ್ಯಾಪ್ತಿಯಲ್ಲಿತ್ತು. ಆದರೆ, ಇದೀಗ ಅದು ಇದೀಗ ಪ್ರತ್ಯೇಕ ತಾಲೂಕು ಕೇಂದ್ರವು ಆಗಿದೆ. ಹೀಗಾಗಿ ಅಲ್ಲಿಗೆ ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವಿದೆ. ಹೆಚ್ಚಿನ ಜನಸಂಖ್ಯೆ ಇದ್ದು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಬೇಕು' ಎಂದು ಆಗ್ರಹಿಸಿದರು. ಈ ಕುರಿತು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News