ಉಗ್ರ ಸಂಘಟನೆ ಜೊತೆ ನಂಟಿನ ಆರೋಪದಲ್ಲಿ ಬಂಧಿತ ಯುವಕನ ತಂದೆ ನಿಧನ

Update: 2022-09-23 14:01 GMT
ಮುನೀರ್ ಸಾಬ್ಜಾನ್ 

ಮಂಗಳೂರು, ಸೆ.23: ನಗರದ ಬಿಜೈಯ ವಸತಿ ಸಮುಚ್ಚಯದ ಕಾಂಪೌಂಡ್‌ನ ‘ಗೋಡೆ ಬರೆಹ ಪ್ರಕರಣ’ ಹಾಗು ಉಗ್ರ ಸಂಘಟನೆ ಜೊತೆ ನಂಟಿನ ಆರೋಪದಲ್ಲಿ ಇತ್ತೀಚಿಗೆ ಬಂಧಿತನಾದ ಶಿವಮೊಗ್ಗ ಜಿಲ್ಲೆಯ ಮಾಝ್ ಮುನೀರ್ ಅಹಮ್ಮದ್ ಯಾನೆ ಮುನೀರ್‌ನ ತಂದೆ ಮುನೀರ್ ಸಾಬ್ಜಾನ್ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

2020ರ ನವೆಂಬರ್‌ನಲ್ಲಿ ಬೆಳಕಿಗೆ ಬಂದ ನಗರದ ಗೋಡೆ ಬರಹ ಪ್ರಕರಣದಲ್ಲಿ ಮಾಝ್ ಮುನೀರ್ ಆರೋಪಿಯಾಗಿದ್ದ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಕದ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಕೆಲವು ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ತಂದೆ-ತಾಯಿಯ ಜೊತೆ ನೆಲೆಸಿದ್ದ ಮಾಝ್ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಈತನ ತಂದೆ ಮುನೀರ್ ಸಾಬ್ಜಾನ್ ಕದ್ರಿ ಪೊಲೀಸರಿಗೆ ಅಂಚೆ ಮೂಲಕ ನಾಪತ್ತೆ ದೂರು ನೀಡಿದ್ದರು. ಅಲ್ಲದೆ ಹೈಕೋರ್ಟ್‌ನಲ್ಲೂ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು.

ನಿಷೇಧಿತ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಸೆ.20ರಂದು ವಿಶೇಷ ಪೊಲೀಸ್ ತಂಡವು ಮಾಝ್‌ನನ್ನು ಬಂಧಿಸಿತ್ತು.

ಆ ಬಳಿಕ ಮಾಝ್‌ನ ತಂದೆ ಮುನೀರ್ ಸಾಬ್ಜಾನ್‌ನ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಪರಾಹ್ನದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮುನೀರ್ ಸಾಬ್ಜಾನ್ ನಿಧನರಾದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News