ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ: ಸಿಎಂ ಬೊಮ್ಮಾಯಿ

Update: 2022-09-23 14:42 GMT

ಬೆಂಗಳೂರು, ಸೆ.23: ಕಾಂಗ್ರೆಸ್ ಪಕ್ಷದವರದ್ದು ಹೆಜ್ಜೆ ಹೆಜ್ಜೆಗೂ ಹಗರಣಗಳಿವೆ. ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ವಿಧಾನಸಭೆ ಅಧಿವೇಶನ ಮುಕ್ತಾಯವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರ ಭ್ರಷ್ಟಾಚಾರದ ಬಗ್ಗೆ ಪಕ್ಷದ ವತಿಯಿಂದ ಪುಸಕ್ತವನ್ನೆ ಬಿಡುಗಡೆ ಮಾಡಿದ್ದೆವು. ಅವರು ಭ್ರಷ್ಟರಾಗಿದ್ದುಕೊಂಡು ಅಭಿಯಾನ ಮಾಡುತ್ತಾರಂತೆ. ಯಾವ ಅಭಿಯಾನವನ್ನಾದರೂ ಮಾಡಲಿ, ಕೊನೆಗೆ ಸತ್ಯಕ್ಕೆ ಜಯ ಸಿಗಲಿದೆ ಎಂದರು.

ಒಂದು ಸಣ್ಣ ಪುರಾವೆ ಇಲ್ಲದೆ ಮಾತನಾಡುವ ಈ ಪ್ರವೃತ್ತಿ ಬಹಳ ದಿನ ನಡೆಯುವುದಿಲ್ಲ. ಗುತ್ತಿಗೆದಾರರ ಸಂಘದ ವಿಷಯದಲ್ಲಿ ಈಗಾಗಲೇ ಉತ್ತರ ನೀಡಲಾಗಿದೆ. ಒಂದು ವಿಚಾರವನ್ನು ಪದೇ ಪದೇ ಹೇಳಿದರೆ ಅದು ಸತ್ಯವಾಗುವುದು ಎಂದು ಕಾಂಗ್ರೆಸ್ ತಿಳಿದುಕೊಂಡಂತಿದೆ. ಆ ಕಾಲ ಹೋಗಿದೆ. ಜನಕ್ಕೆ ಸತ್ಯ ಏನೆಂದು ತಿಳಿದಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಒಂದು ವರ್ಷದ ಹಿಂದೆ ಸಂಘ ಪತ್ರ ಬರೆದಿದೆ. ಒಂದು ಸಣ್ಣ ದೂರು ದಾಖಲಿಸಿ ಅದಕ್ಕೆ ಸೂಕ್ತ ದಾಖಲೆಗಳನ್ನು ಕೊಡಬೇಕು. ಎಲ್ಲೆಲ್ಲಿ ಕೊಟ್ಟಿದ್ದೀರಿ, ಅಥವಾ ಎಲ್ಲಿ ಕೊಡಲು ಒತ್ತಡ ಬಂದಿತ್ತು, ಯಾವ ಇಲಾಖೆ, ಯಾರಿಗೆ, ಯಾರು ಮಾತನಾಡಿದ್ದರು ಎಂಬ ಬಗ್ಗೆ ಸಣ್ಣ ದೂರು ನೀಡಿದರೆ, ಅದರ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಹಾಗೂ ಲೋಕಾಯುಕ್ತಕ್ಕೆ ನೇರವಾಗಿ ಪ್ರಕರಣವನ್ನು ವಹಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇಬ್ಬರು ಪದಾಧಿಕಾರಿಗಳು ಮಾತನಾಡಿದ್ದಾರೆ. ಅದು ಮಾಧ್ಯಮಗಳಲ್ಲಿ ಬಿತ್ತರವೂ ಆಗಿದೆ. ಅದಕ್ಕೆ ಉತ್ತರವಿಲ್ಲ. ರಮೇಶ್ ಕುಮಾರ್ ಅವರು ಮೂರು ತಲೆಮಾರಿಗಾಗುವಷ್ಟು ನಾವು ಋಣದಲ್ಲಿದ್ದೇವೆ. ಬೇಕಾದಷ್ಟು ಮಾಡಿಕೊಂಡಿದ್ದೇವೆ ಸ್ವಲ್ಪ ಕೊಡಬೇಕು ಎಂದು ಮೊನ್ನೆಯಷ್ಟೇ ಭಾಷಣ ಮಾಡಿದ್ದಾರೆ. ಅವರಲ್ಲಿಯೇ ಬೇಕಾದಷ್ಟು ಚರ್ಚೆ ನಡೆಯುತ್ತಿದೆ. ಚರ್ಚೆ ಮಾಡಲು ತಯಾರಿಲ್ಲ ಎನ್ನುತ್ತಾರೆ. ಚರ್ಚೆಗೆ ನಾವು ಸಿದ್ಧ ಎಂದು ಅವರು ಹೇಳಿದರು.

40 ಪರ್ಸೆಂಟ್ ಬಗ್ಗೆ ಆರೋಪ ಮಾಡುವ ಸಿದ್ದರಾಮಯ್ಯ, ಯಾರು ಕೊಟ್ಟಿದ್ದಾರೆ ಎಂದು  ಹೇಳಬೇಕು. ನಾವು ಕೇಳೋಕ್ಕೆ ತಯಾರಿದ್ದೇವೆ. ಚರ್ಚೆಯಾಗಲಿ ಎಂದೇ ನಾವೂ ಸದನದಲ್ಲಿ ಕೂತಿದ್ದು. ಆದರೆ ಅವರ ಇಂದಿನ ವರ್ತನೆ ನೋಡಿದರೆ ಈ ವಿಷಯವನ್ನು ಮೊದಲೇ ತೆಗೆದುಕೊಳ್ಳಬಹುದಾಗಿತ್ತು. ಅವರಿಗೆ ಅಧಿಕಾರವಿದೆ. ವಿರೋಧಪಕ್ಷದಲ್ಲಿಯೇ ಹೊಂದಾಣಿಕೆ ಇಲ್ಲ. ಅವರಿಗೆ ಇದರಲ್ಲಿ ಏನೂ ಇಲ್ಲ, ನಿರ್ದಿಷ್ಟ ಆರೋಪಗಳಿಲ್ಲ ಎಂದು ಗೊತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.  

ಗುತ್ತಿಗೆದಾರರ ಸಂಘವು ಕಾಂಗ್ರೆಸ್ ಪ್ರಾಯೋಜಿತ ಸಂಘ. ಈ ಆರೋಪದಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ಸಿಗರಿಗೂ ಗೊತ್ತಿದೆ. ಈಗಾಗಲೇ ಸಚಿವ ಮುನಿರತ್ನ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದಿಂದ ನೋಟಿಸ್ ಜಾರಿಯಾದರೂ ಯಾವ ಆಧಾರವನ್ನೂ ನೀಡಿಲ್ಲ. ನಾವು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆಂಪಣ್ಣ ಸುಧಾರಣೆಗಳೇನು ಮಾಡಬಹುದು ಎಂಬ ಬಗ್ಗೆ ಪತ್ರ ನೀಡಿದ್ದರು. ಆ ಸುಧಾರಣೆಗಳಿಗೆ ಆದೇಶ ಮಾಡಲಾಗಿದೆ. ಆದರೆ ಅವರು ನಿರ್ದಿಷ್ಟ ಪ್ರಕರಣದ ಬಗ್ಗೆ ದಾಖಲೆ ನೀಡಿದರೆ ತನಿಖೆ ಮಾಡುತ್ತೇವೆ. ಲೋಕಾಯುಕ್ತ ಸಂಸ್ಥೆಗೆ ನ್ಯಾಯಾಂಗದವರೇ ಮುಖ್ಯಸ್ಥರು. ಅಲ್ಲಿಗೇ ಕೊಡಲಿ. ಅಲ್ಲಿ ತನಿಖೆ ನಾಳೆಯೇ ಪ್ರಾರಂಭವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.  

ಎರಡು ವಾರಗಳ ಕಾಲ ವಿಧಾನಸಭಾ ಅಧಿವೇಶನ ನಡೆದು ಹತ್ತು ಹಲವಾರು ವಿಚಾರಗಳ ಚರ್ಚೆಯಾಗಿವೆ. ನೂರಾರು ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಿದೆ. ಪ್ರವಾಹದ ಪರಿಸ್ಥಿತಿ ಬಗ್ಗೆ ನಾಲ್ಕು ದಿನಗಳ ಕಾಲ ಎರಡೂ ಸದನದಲ್ಲಿ ಚರ್ಚೆಯಾಗಿದೆ. ರಾಜಕೀಯವಾಗಿ ಹಲವಾರು  ವಿಚಾರಗಳನ್ನು ಎತ್ತಲಾಗಿದೆ. ಆದರೆ ವಿರೋಧಪಕ್ಷಗಳು ಎತ್ತಿರುವ ಪಿಎಸ್ಸೈ ನೇಮಕಾತಿ ಪ್ರಕರಣ ಹಾಗೂ ಮತ್ತಿತರ ವಿಚಾರಗಳು ಅವರಿಗೇ ತಿರುಗೇಟಾಗಿದೆ ಎಂದು ಅವರು ಹೇಳಿದರು.

ಪೊಲೀಸ್ ಪೇದೆ ನೇಮಕಾತಿಯಲ್ಲಿ ಡಿಐಜಿ ಶ್ರೀಧರನ್ ಮೇಲೆ ಸಿಐಡಿ ಎಫ್‍ಐಆರ್ ಹಾಕಿ ತನಿಖೆ ಮಾಡಿದರೂ ಸರಕಾರದ ಮಟ್ಟಕ್ಕೆ ಬಂದಾಗ ಕಾನೂನು ಕ್ರಮಕ್ಕೆ ಅನುಮತಿ ನೀಡಿರಲಿಲ್ಲ. ಅಂದು ಅನುಮತಿ ನೀಡಿದ್ದರೆ, ಅವರೂ ಶಿಕ್ಷೆಗೆ ಒಳಪಡಬೇಕಿತ್ತು. ಈಗ ಅವರು ನಿವೃತ್ತಿ ಹೊಂದಿದ್ದಾರೆ. ಈಗ ನಾನು ಮುಖ್ಯಮಂತ್ರಿಯಾದ ಬಳಿಕ ಕಾನೂನಿನ ಕ್ರಮಕ್ಕೆ ಅನುಮತಿ ನೀಡಿದ್ದೇನೆ. ಶಿಕ್ಷಕರ ನೇಮಕಾತಿ ಬಗ್ಗೆ ಈಗಾಗಲೇ ಸುಮಾರು ಜನರನ್ನು ಬಂಧಿಸಿ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.  

''ಸಚಿವ ಸಂಪುಟ ವಿಸ್ತರಣೆ''

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರು ಆದಷ್ಟೂ ಬೇಗನೇ ಮಾಡೋಣ ಎಂದು ಭರವಸೆ ನೀಡಿದ್ದಾರೆ. ಸದನ ಮುಕ್ತಾಯವಾಗಲು ಕಾಯುತ್ತಿದ್ದೆವು. ನನ್ನನ್ನು ಕರೆಸಿ ಮಾತನಾಡಿದರೆ, ಆದಷ್ಟೂ ಬೇಗನೇ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಈ ಬಗ್ಗೆ ವರಿಷ್ಠರ ಅನುಮತಿ ಪಡೆದು ವಿಸ್ತರಣೆ ಮಾಡಲಾಗುವುದು.

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News