ಇರಾನ್‍ನಲ್ಲಿ ಮುಂದುವರಿದ ಹಿಂಸಾತ್ಮಕ ಪ್ರತಿಭಟನೆ; 26 ಮಂದಿ ಬಲಿ

Update: 2022-09-24 02:52 GMT

ದುಬೈ: ಇರಾನ್ ಪೊಲೀಸ್ ಕಸ್ಟಡಿಯಲ್ಲಿ ಯುವತಿಯೊಬ್ಬಳು ಸಾವಿಗೀಡಾದ ಬೆನ್ನಲ್ಲೇ ದೇಶಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿರುವ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ.

ಶುಕ್ರವಾರ ಕೂಡಾ ವ್ಯಾಪಕ ಪ್ರತಿಭಟನೆ ಮುಂದುವರಿದಿದ್ದು, ಭದ್ರತಾ ಪಡೆಗಳ ಜತೆ ಜನ ನಡೆಸಿದ ಸಂಘರ್ಷದಲ್ಲಿ 26 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಟಿವಿ ಹೇಳಿದೆ. ಆದರೆ ವಿವರಗಳನ್ನು ಬಹಿರಂಗಪಡಿಸಿಲ್ಲ.

ಇರಾನ್‍ನ ಹಲವು ನಗರಗಳಲ್ಲಿ ಪ್ರತಿಭಟನೆಗೆ ಅವಕಾಶ ಅಸ್ಪಷ್ಟವಾಗಿದ್ದರೂ, 2019ರ ಬಳಿಕ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಇದಾಗಿದೆ ಎಂದು ಹೇಳಲಾಗಿದೆ. 2019ರಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ನೂರಾರು ಮಂದಿ ಜೀವ ಕಳೆದುಕೊಂಡಿದ್ದರು.

ಇರಾನ್‍ನಲ್ಲಿ ಹೊರ ಜಗತ್ತಿಗೆ ಇಂಟರ್‍ನೆಟ್ ಲಭ್ಯತೆ ಕೂಡಾ ವ್ಯತ್ಯಯವಾಗಿದೆ ಎಂದು ಇಂಟರ್‍ನೆಟ್ ಸಂಚಾರ ನಿಗಾ ಸಂಸ್ಥೆಯಾದ ಬೆಟ್‍ಬ್ಲಾಕ್ಸ್ ಹೇಳಿದೆ. ಪ್ರತಿಭಟನಾ ಸಂದೇಶವನ್ನು ಹರಡಲು ಬಳಸುವ ಇನ್‍ಸ್ಟಾಗ್ರಾಂ ಹಾಗೂ ವಾಟ್ಸಪ್‍ನಂಥ ವೇದಿಕೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಕಳೆದ ಶನಿವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಕನಿಷ್ಠ 26 ಮಂದಿ ಪ್ರತಿಭಟನಾಕಾರರು ಮತ್ತು ಪೊಲೀಸರು ಜೀವ ಕಳೆದುಕೊಂಡಿದ್ದಾರೆ ಎಂದು ಟಿವಿ ನಿರೂಪಕಿಯೊಬ್ಬರು ಹೇಳಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ 22 ವರ್ಷ ವಯಸ್ಸಿನ ಮಶಾ ಅಮಿನಿಯ ಅಂತ್ಯಸಂಸ್ಕಾರದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಆದರೆ ಇರಾನ್ ಸರ್ಕಾರ ಅಧಿಕೃತವಾಗಿ ಸಾವಿನ ಸಂಖ್ಯೆಯನ್ನು ಪ್ರಕಟಿಸಿಲ್ಲ ಎಂದು newindianexpress.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News