ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ: ಇಬ್ಬರ ಮೃತ್ಯು, ವ್ಯಾಪಕ ಹಾನಿ

Update: 2022-09-24 15:17 GMT
JAPAN TALAS TYPHOON

ಟೋಕಿಯೊ, ಸೆ.24: ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಜತೆ ತಲಾಸ್ ಚಂಡಮಾರುತ ಶನಿವಾರ ಮಧ್ಯ ಜಪಾನ್‌ಗೆ ಅಪ್ಪಳಿಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ವಿದ್ಯುತ್ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಹಲವೆಡೆ ಬುಲೆಟ್ ಟ್ರೈನ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

 ಸುಮಾರು 1,20,000 ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಈ ವಾರದ ಆರಂಭದಲ್ಲಿ ಜಪಾನ್ ನ್ಯಾನ್ಮದೋಲ್ ಚಂಡಮಾರುತದ ಪ್ರಹಾರಕ್ಕೆ ಸಿಲುಕಿ ತತ್ತರಿಸಿತ್ತು. ಶನಿವಾರ ಜಪಾನ್‌ನ ಶಿಝುವೊಕ ನಗರದಲ್ಲಿ 417 ಮಿಮೀ ದಾಖಲೆ ಪ್ರಮಾಣದ ಮಳೆ ಸುರಿದಿದ್ದು ಹಲವೆಡೆ ಭೂಕುಸಿತದ ವರದಿಯಾಗಿದೆ. ಜತೆಗೆ ಗಂಟೆಗೆ 65 ಕಿ.ಮೀ ವೇಗದ ಗಾಳಿಯಿಂದ ಹಲವೆಡೆ ಮರಗಳು ರಸ್ತೆಯ ಮೇಲೆ ಉರುಳಿಬಿದ್ದು ಸಂಚಾರಕ್ಕೆ ತಡೆಯಾಗಿದೆ ಎಂದು ಜಪಾನ್‌ನ ಹವಾಮಾನ ಸಂಸ್ಥೆ ಹೇಳಿದೆ. ರಾಜಧಾನಿ ಟೋಕಿಯೊ ಸೇರಿದಂತೆ ಕೇಂದ್ರ, ಪೂರ್ವ ಮತ್ತು ಉತ್ತರ ಜಪಾನ್‌ನಲ್ಲಿ ಭಾರೀ ಮಳೆ, ಭೂಕುಸಿತ ಹಾಗೂ ಪ್ರವಾಹ ಉಂಟಾಗಬಹುದು , ಜತೆಗೆ ಸಮುದ್ರದಲ್ಲಿ ಬೃಹತ್ ಅಲೆಗಳು ಏಳಬಹುದು ಎಂದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹಮಮತ್ಸು ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 9 ವರ್ಷದ ಬಾಲಕನ ಸಹಿತ 3 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News