ಈಶಾನ್ಯ ರಾಜ್ಯಗಳ ನಂಬರ್ ಪ್ಲೇಟ್ ಹೊಂದಿದ ಖಾಸಗಿ ಬಸ್‌ಗಳು ಮರು ನೋಂದಾಯಿಸಬೇಕು: ರಾಜ್ಯ ಸಾರಿಗೆ ಇಲಾಖೆ
ಬೆಂಗಳೂರು: ಈಶಾನ್ಯ ರಾಜ್ಯಗಳಲ್ಲಿ ನೋಂದಣಿಯಾದ ನಂಬರ್ ಪ್ಲೇಟ್ ಹೊಂದಿರುವ ಬಸ್‍ಗಳ ಸಂಚಾರ ರಾಜ್ಯದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ದಂಧೆಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಇಂಥ ಎಲ್ಲ ಬಸ್‍ಗಳನ್ನು ಈ ತಿಂಗಳ 30ರ ಒಳಗೆ ರಾಜ್ಯದಲ್ಲಿ ಮರು ನೋಂದಾಯಿಸಬೇಕು ಎಂದು ಇಲಾಖೆ ಆದೇಶಿಸಿದೆ.
"ಈಶಾನ್ಯ ರಾಜ್ಯಗಳ ನೋಂದಣಿ ಹೊಂದಿರುವ ಬಸ್ ಮಾಲಕರು ಇಲ್ಲಿ ಮರು ನೋಂದಾಯಿಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ. ಈ ಬಸ್ಸುಗಳು ಬೆಂಗಳೂರು/ ಕರ್ನಾಟಕದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದರೂ, ಅವುಗಳನ್ನು ನಾಗಾಲ್ಯಾಂಡ್‍ನಂಥ ರಾಜ್ಯಗಳಲ್ಲಿ ನೋಂದಾಯಿಸಲಾಗಿದೆ. ಇದರಿಂದಾಗಿ ನಮ್ಮ ರಾಜ್ಯ ದೊಡ್ಡ ಪ್ರಮಾಣದ ಆದಾಯ ಕಳೆದುಕೊಳ್ಳುತ್ತಿದೆ" ಎಂದು ಸಾರಿಗೆ ಆಯುಕ್ತ ಟಿಎಚ್‍ಎಂ ಕುಮಾರ್ ಹೇಳಿದ್ದಾರೆ.
"ವನ್ ನೇಷನ್, ವನ್ ಪರ್ಮಿಟ್ ಯೋಜನೆಯಡಿ ಎಲ್ಲಿ ಬೇಕಾದರೂ ನೋಂದಣಿ ಮಾಡಲು ಅವಕಾಶವಿದೆ. ಆದರೆ ಅವರು ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾಗಾಲ್ಯಾಂಡ್‍ನಲ್ಲಿ ನೋಂದಣಿಯಾಗಿರುವ ಬಸ್ಸುಗಳು ಆ ರಾಜ್ಯದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಒಂದು ವೇಳೆ ಬಸ್ಸು ಕರ್ನಾಟಕದಲ್ಲಿ ಅಪಘಾತಕ್ಕೀಡಾದರೆ, ಕಾನೂನು ಸಂಕೀರ್ಣತೆಗಳು ಎದುರಾಗುವ ಸಾಧ್ಯತೆ ಇರುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಸುಮಾರು 800 ಇಂಥ ಬಸ್ಸುಗಳಿವೆ. ಕರ್ನಾಟಕದಲ್ಲಿ ತೆರಿಗೆ ಅಧಿಕ ಇರುವುದರಿಂದ ನಾಗಾಲ್ಯಾಂಡ್, ಅರುಣಾಚಲ ಪ್ರದೇಶದಂಥ ರಾಜ್ಯಗಳಲ್ಲಿ ನೋಂದಾಯಿಸುವುದು ಅನಿವಾರ್ಯ ಎನ್ನುವುದು ಖಾಸಗಿ ಬಸ್ ಮಾಲಕರ ಹೇಳಿಕೆ.
ಕರ್ನಾಟಕದಲ್ಲಿ ಮೂರು ತಿಂಗಳಿಗೆ ಒಂದು ಆಸನಕ್ಕೆ 4400 ರೂ. ಶುಲ್ಕ ವಿಧಿಸಲಾಗುತ್ತದೆ. ಇದನ್ನು 1000 ರೂಪಾಯಿಗೆ ಇಳಿಸಿದರೆ ಆರು ತಿಂಗಳ ಒಳಗಾಗಿ ಎಲ್ಲ ಬಸ್ಸುಗಳನ್ನು ರಾಜ್ಯದಲ್ಲಿ ಮರು ನೋಂದಾಯಿಸಲು ಸಿದ್ಧ. ಕರ್ನಾಟಕದಲ್ಲಿ ನಾವು ಮೂರು ತಿಂಗಳಿಗೆ ತೆರಿಗೆ ರೂಪದಲ್ಲಿ 1.20 ಲಕ್ಷ ರೂಪಾಯಿಯಿಂದ 1.92 ಲಕ್ಷವರೆಗೆ ಪಾವತಿಸಬೇಕಾಗುತ್ತದೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಇದು 15 ಸಾವಿರ ಮಾತ್ರ ಇದೆ. ಪುದುಚೇರಿಯಲ್ಲಿ ಇದು ಮೂರು ತಿಂಗಳಿಗೆ 45 ಸಾವಿರ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ನಟರಾಜ್ ಶರ್ಮಾ ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.