ಮಂಗಳೂರು : ಎಂಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆ

Update: 2022-09-25 17:18 GMT

ಮಂಗಳೂರು : ಎಂಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯು ಮಂಗಳೂರಿನ ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ( ಲೊಯೊಲಾ ಹಾಲ್) ರವಿವಾರ ಜರುಗಿತು. 

ಎಂ.ಸಿ.ಸಿ. ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾದಿಸಿದ್ದು 2021-22ನೇ ವಿತ್ತೀಯ ವರ್ಷದಲ್ಲಿ ಶೇಕಡಾ 10% ಲಾಭಾಂಶ ಘೋಷಿಸಿರುತ್ತದೆ. ಜೊತೆಗೆ, ಬ್ಯಾಂಕ್ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು (ಶೇಕಡಾ 138), ಬ್ಯಾಂಕಿನ ನಿವ್ವಳ ಲಾಭವು ರೂ.8.27 ಕೋಟಿಯಾಗಿರುತ್ತದೆ ಎಂದು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು. ಅವರು ಬ್ಯಾಂಕಿನ 104ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.

ಎಂ.ಸಿ.ಸಿ.ಬ್ಯಾಂಕ್ ಒಟ್ಟು ಠೇವಣಿಯಲ್ಲಿ ಶೇಕಡಾ 16.47% ಪ್ರಗತಿ ಸಾಧಿಸಿದ್ದು, ರೂ.532.08 ಕೋಟಿ ಠೇವಣಿ, ಒಟ್ಟು ಮುಂಗಡದಲ್ಲಿ ಶೇಕಡಾ 7.16% ಪ್ರಗತಿ ಸಾಧಿಸಿದ್ದು ರೂ.328.56 ಕೋಟಿ ಮುಂಗಡಗಳು, ದುಡಿಯುವ ಬಂಡವಾಳ ರೂ.615.06 ಕೋಟಿ (ಪ್ರಗತಿ ಶೇಕಡಾ 14) ಮತ್ತು ಶೇರು ಬಂಡವಾಳ ರೂ.18.43 ಕೋಟಿ ಆಗಿದೆ ಎಂದರು. ಜೊತೆಗೆ ಬ್ಯಾಂಕಿನ ಎನ್.ಪಿ.ಎ. ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ 3.23% ದಿಂದ 1.60%ಕ್ಕೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ. ಬ್ಯಾಂಕಿನ ಅನುತ್ಪಾದಕ ಸಾಲಕ್ಕೆ ಒದಗಿಸಿದ ಅವಕಾಶದ ಅನುಪಾತವು 77.61% ಆಗಿರುತ್ತದೆ. ಬ್ಯಾಂಕಿನ ಅಖಂಖ ಪ್ರಮಾಣವು ಆರ್‍ಬಿಐ ನಿಗದಿಪಡಿಸಿರುವ ಕನಿಷ್ಟ ಮಿತಿ ಶೇಕಡಾ 9%ಕ್ಕಿಂತ ಹೆಚ್ಚಿದ್ದು, 15.35% ಇರುತ್ತದೆ ಎಂದರು. ಬ್ಯಾಂಕಿನ ಪ್ರಗತಿಗೆ ಕಾರಣರಾದ ಗ್ರಾಹಕರು, ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳನ್ನು ಅಭಿನಂದಿಸಿದರು.

ತಮ್ಮ ಮಾತನ್ನು ಮುಂದುವರಿಸುತ್ತಾ, ಬ್ಯಾಂಕಿನ ಶಾಖೆಗಳಲ್ಲಿ ನಡೆಸಿದ ಗ್ರಾಹಕ ಸಂಪರ್ಕ ಸಭೆಗಳು, ಗ್ರಾಹಕರು ಮತ್ತು ಸದಸ್ಯರ ಶ್ಲಾಘನೆಗೆ ಪಾತ್ರವಾಗಿದೆ. ಬ್ಯಾಂಕ್, ಸೃಜನಶೀಲ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲು ಬದ್ಧವಾಗಿದ್ದು, ಯೋಗ್ಯ ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಹಕರ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಪಾರದರ್ಶಕ ಸೇವೆಯನ್ನು ನೀಡಿ ಬ್ಯಾಂಕಿನ ಪ್ರಗತಿಯಲ್ಲಿ ಮುನ್ನಡೆಯವುದೇ ಬ್ಯಾಂಕಿನ ಪ್ರಮುಖ ಧ್ಯೇಯವಾಗಿದೆ ಎಂದರು. ಬ್ಯಾಂಕಿನ ಪ್ರಗತಿಯಿಂದ ಸಮಾಜದ ಯುವ ಪೀಳಿಗೆಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಬ್ಯಾಂಕಿನ ಪ್ರಗತಿಗೆ ಮಾರಕವಾಗುವಂತೆ ವದಂತಿಗಳನ್ನು ಹಬ್ಬಿಸಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯಚಟುವಟಿಕೆಗಳನ್ನು ನಡೆಸಿದ ಸಂದರ್ಭದಲ್ಲಿ ಬ್ಯಾಂಕಿನ ಬೆನ್ನೆಲುಬಾಗಿ ನಿಂತು ಸಹಕರಿಸಿದ ಎಲ್ಲಾ ಸದಸ್ಯರನ್ನು ಮತ್ತು ಗ್ರಾಹಕರನ್ನು ಅಭಿನಂದಿಸಿದರು.

ಈ ಸಭೆಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ ಎಲ್ಲಾ ಸದಸ್ಯರಿಗೆ ವಂದನೆಗಳನ್ನು ಸಲ್ಲಿಸುತ್ತ, ಬ್ಯಾಂಕ್ ಈ ವರ್ಷ, 27 ನವೆಂಬರ್, 2022ರಂದು ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆಚರಿಸುವ ಶತಮಾನೋತ್ತರ ದಶಮಾನೋತ್ಸವ ಸಮಾರಂಭಕ್ಕೆ ಸವಿನಯ ಆಮಂತ್ರಣವನ್ನು ನೀಡಿದರು..   

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ 103ನೇ ವಾರ್ಷಿಕ ಸಾಮಾನ್ಯ ಸಭೆಯ ವಿವರಗಳನ್ನು ಓದಿದರು. 2021-22ರ ಲೆಕ್ಕ ಪರಿಶೋಧಿತ ಹಣಕಾಸು, ಲೆಕ್ಕ ಪರಿಶೋಧನಾ ವರದಿ, 2022-23ರ ಆರ್ಥಿಕ ವರ್ಷದ ಚಟುವಟಿಕೆಗಳ ಕಾರ್ಯಕ್ರಮ ಮತ್ತು 2022-23ರ ಬಜೆಟ್ ಅನ್ನು ಸಾಮಾನ್ಯ ಸಭೆಯ ಮುಂದೆ ಮಂಡಿಸಿ, ಅನುಮೋದನೆ ಪಡೆಯಲಾಯಿತು.

ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಸದಸ್ಯರು ನೀಡಿದ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ವರ್ಷದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. 

ನಿರ್ದೇಶಕರಾದ ಅಂಡ್ರ್ಯೂ ಡಿಸೋಜ, ಮಾರ್ಸೆಲ್ ಡಿಸೋಜ, ಜೆ. ಪಿ. ರೊಡ್ರಿಗಸ್, ಎಲ್‍ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿ’ಸೋಜ, ಅನಿಲ್ ಪತ್ರಾವೊ, ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೇರೊ, ಡಾ| ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಸಾಂತ್ ಸಲ್ಡಾನ್ಹಾ, ವ್ಯವಸ್ಥಾಪನಾ ಸಮಿತಿಯ ನಿರ್ದೇಶಕರಾದ ಶರ್ಮಿಳಾ ಮಿನೇಜಸ್, ಆಲ್ವಿನ್ ಪಿ. ಮೊಂತೇರೊ, ಪೆಲಿಕ್ಸ್ ಡಿಕ್ರುಜ್, ಜನರಲ್ ಮ್ಯಾನೇಜರ್ ಸುನಿಲ್ ಮಿನೆಜಸ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ರಾಜ್ ಮಿನೆಜಸ್ ಉಪಸ್ಥಿತರಿದ್ದರು.

ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News