ಐದು ವರ್ಷಗಳಲ್ಲಿ ರಕ್ಷಣಾ ವಲಯದ ರಫ್ತಿನಲ್ಲಿ ಶೇ.334ರಷ್ಟು ಏರಿಕೆ

Update: 2022-09-25 18:30 GMT

ಹೊಸದಿಲ್ಲಿ, ಸೆ.25:  ಕಳೆದ ಐದು ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ರಫ್ತಿನ ಪ್ರಮಾಣವು 334 ಶೇಕಡದಷ್ಟು ಏರಿಕೆಯಾಗಿದ್ದು, ಸಹಕಾರಿ  ಪ್ರಯತ್ನಗಳಿಂದಾಗಿ ಭಾರತವು ಈಗ  75ಕ್ಕೂ ಅಧಿಕ ರಾಷ್ಟ್ರಗಳಿಗೆ ರಕ್ಷಣಾ ಸಾಮಾಗ್ರಿಗಳನ್ನು ರಫ್ತುಗಳನ್ನು ಮಾಡುತ್ತಿದೆಯೆಂದು ಕೇಂದ್ರ ಸರಕಾರ ರವಿವಾರ  ತಿಳಿಸಿದೆ.

‘ಈ ರಫ್ತು ಕ್ರಾಂತಿಯಲ್ಲಿ ಭಾರತೀಯ ರಕ್ಷಣಾ ವಲಯವು  ಉತ್ತುಂಗ ಸ್ಥಿತಿಯಲ್ಲಿದೆ’ ಎಂದು  ಕೇಂದ್ರ ಸರಕಾರದ  ಮಾಧ್ಯಮ  ಮಾಹಿತಿ ಇಲಾಖೆ ಟ್ವೀಟ್ ಮಾಡಿದೆ.

‘‘ಕಳೆದ ಐದು ವರ್ಷಗಳಲ್ಲಿ ರಕ್ಷಣಾ ವಲಯದ ರಫ್ತಿನ ಪ್ರಮಾಣದಲ್ಲಿ ಶೇ.334ರಷ್ಟು ಏರಿಕೆಯಾಗಿದೆ. ಸಹಯೋಗದ  ಪ್ರಯತ್ನಗಳಿಂದಾಗಿ ಭಾರತವು ಈಗ 75ಕ್ಕೂ ಅಧಿಕ ದೇಶಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ’’ ಎಂದು ಅದು ಹೇಳಿದೆ.

ಭಾರತದ ಚೊಚ್ಚಲ ಸ್ವದೇಶಿ ವಿಮಾನವಾಹನಕ ನೌಕೆ ಐಎನ್‌ಎಸ್ ವಿಕ್ರಾಂತ್, ನೌಕಾಪಡೆಗೆ ಸೇರ್ಪಡೆಗೊಂಡಿರುವ ವಿಷಯವನ್ನೂ ಅದು ಟ್ವೀಟ್‌ನಲ್ಲಿ ಪ್ರಸ್ತಾವಿಸಿದೆ.

ಸ್ವದೇಶಿ ನಿರ್ಮಿತ ಅತ್ಯಾಧುನಿಕ ಎಂಕೆ-III ಲಘು ಹೆಲಿಕಾಪ್ಟರ್‌ಗಳ ಸ್ಕ್ವಾಡ್ರನ್, ಭಾರತೀಯ ತಟರಕ್ಷಣಾ ಪಡೆಗೆ ಸೇರ್ಪಡೆ ಹಾಗೂ ಹೊಸ ತಲೆಮಾರಿನ ಅಣ್ವಸ್ತ್ರ ವಾಹಕ ಸಾಮರ್ಥ್ಯದ ಪ್ರಕ್ಷೇಪಕ ಕ್ಷಿಪಣಿ ‘ಅಗ್ನಿ ಪಿ’ಯ ಸೇರ್ಪಡೆಯನ್ನು ಕೂಡಾ ಅದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಜಯ್ ಕುಮಾರ್ ಅವರು ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ  ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ರಕ್ಷಣಾ ವಲಯಕ್ಕೆ ಶಕ್ತಿತುಂಬುವ ಹಾಗೂ ರಕ್ಷಣಾ ಉತ್ಪಾದನೆಯಲ್ಲಿ ಜಗತ್ತಿನ ಐದು ರಾಷ್ಟ್ರಗಳಲ್ಲೊಂದಾಗಿ ಭಾರತವನ್ನು ಗುರುತಿಸುವ ಮಾಡುವುದೇ ದೇಶದ ಅಮೃತ ಕಾಲದ ದೂರದೃಷ್ಟಿಯಾಗಿದೆ ಎಂದು ಹೇಳಿದ್ದರು.

ಕಳೆದ  75 ವರ್ಷಗಳಲ್ಲಿ ಭಾರತವು,ರಕ್ಷಣಾ ಉತ್ಪನ್ನಗಳ ಅತಿ ದೊಡ್ಡ ಆಮದುದಾರ ರಾಷ್ಟ್ರಗಳಲ್ಲೊಂದಾಗಿಯೇ ಉಳಿದುಕೊಂಡಿದೆ ಹಾಗೂ ಈ ಪರಿಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಸರಕಾರ ಬಯಸಿದೆಯೆಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News