ಸುರತ್ಕಲ್ | ದ್ವಿಚಕ್ರ ವಾಹನ ಕಳವು ಪ್ರಕರಣದ ಆರೋಪಿಗಳ ಬಂಧನಕ್ಕೆ‌ ಪೊಲೀಸರಿಂದ ನಿರ್ಲಕ್ಷ್ಯ: ಆರೋಪ

Update: 2022-09-26 08:20 GMT
(ಸ್ಕೂಟಿಯೊಂದಿಗೆ ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯಾವಳಿ)

ಸುರತ್ಕಲ್: ಇಲ್ಲಿನ ಪೊಲೀಸ್ ಠಾಣಾ‌ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಕಳವು, ಹಣ ದರೋಡೆ  ಸೇರಿಂದಂತೆ ಹಲವು ಪ್ರಕರಣಗಳು ದಾಖಲಾಗಿದ್ದರೂ ಆರೋಪಿಗಳ ಬಂಧನಕ್ಕೆ‌ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ‌ ಕೇಳಿ ಬಂದಿದೆ.

ಕಳೆದ ಒಂದು ವಾರದಲ್ಲಿ ಎರಡು ದ್ವಿಚಕ್ರವಾಹನಗಳು ಕಳವಾಗಿರುವ ಮಾಹಿತಿ ಇದೆ. ಈ ಸಂಬಂಧ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದೆ. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ‌ ಊರಿನ ಸುಮಾರು 25ಕ್ಕೂ ಹೆಚ್ಚಿನ ನಾಗರೀಕರು ಸೇರಿ ದೂರು ನೀಡಿದ್ದಾರೆ.

ಆದರೂ ಅವರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕಾಟಿಪಳ್ಳದ ಸ್ಕೂಟಿ ಕಳೆದುಕೊಂಡ ಸಂತ್ರಸ್ತರೊಬ್ಬರು ಪೊಲೀಸರ ವಿರುದ್ಧ ಅಸಹನೆ ಹೊರಹಾಕಿದ್ದಾರೆ.

'ಪೊಲೀಸರು ಕ್ರಮಕ್ಕೆ ಮುಂದಾಗದಿದ್ದ ಕಾರಣ ಕಳ್ಳರು ಸ್ಕೂಟಿಯೊಂದಿಗೆ ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪೊಲೀಸರಿಗೆ ನೀಡಿದ್ದೇವೆ. ಆರೋಪಿಗಳು ಸ್ಥಳೀಯರಾಗಿದ್ದು, ಅವರ‌ ವಿಳಾಸ, ಮೊಬೈಲ್ ಸಂಖ್ಯೆ ಎಲ್ಲವನ್ನು ನೀಡಿದರೂ ಪೊಲೀಸರು ಯಾಕೆ‌ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ಜನರು ಪ್ರಸ್ನಿಸುತ್ತಿದ್ದಾರೆ‌.

ಕೆಲದಿನಗಳಿಂದ‌ ಆರೋಪಿಯೊಬ್ಬನ ಮೊಬೈಲ್‌ ಸ್ವಿಚ್ ಆಫ್‌ ಆಗಿತ್ತು. ಎರಡು ದಿನದ ಹಿಂದೆ ಆತ ಮೊಬೈಲ್ ತೆರೆದು ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾನೆ. ಹೀಗಿದ್ದರೂ ಅವರ‌ ಶೋಧ ಕಾರ್ಯ ಪೊಲೀಸರಿಗೆ ಸಾಧ್ಯವಾಗದಿರುವುದು ಸಂಶಯಕ್ಕೆ ಎಡೆಮಾಡಿ‌ಕೊಡುತ್ತಿದೆ ಎಂದು ಸಂತ್ರಸ್ತ ದೂರುದಾರರೇ ಆರೋಪಿಸಿದ್ದಾರೆ.

ಈ ಕುರಿತು 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಸುರತ್ಕಲ್‌ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದಪ್ಪ ಅವರು, ಈಗಾಗಲೇ ಇಬ್ಬರು ಆರೋಪಿಗಳ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ. ಇಬ್ಬರ ಬಂಧನಕ್ಕೆ ಕ್ರೈಂ ವಿಭಾಗದ ಪೊಲೀಸ್ ತಂಡ ಶೋಧಕಾರ್ಯದಲ್ಲಿ ತೊಡಗಿದೆ. ಆರೋಪಿಗಳು ಸುಳ್ಯದಲ್ಲಿ ಇರುವ ಮಾಹಿತಿ ಇದ್ದು, ನಮ್ಮ ಪೊಲೀಸರ‌ ಒಂದು ತಂಡ ಸುಳ್ಯಕ್ಕೆ ತೆರಳಿದೆ. ಎಲ್ಲಾ ಪೊಲೀಸ್ ಠಾಣೆಗಿಗೆ ಆರೋಪಿಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

''ಸುಳ್ಯದಲ್ಲಿ ನಂಬರ್‌ಪ್ಲೇಟ್ ಇಲ್ಲದ ಬೈಕ್'': ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಸುತ್ತಾಡುತ್ತಿರುವ ಕುರಿತು ಕೆಲವೊಂದು ಸುದ್ದಿ‌ವಾಹಿನಿಗಳು ಫೊಟೊ ಸಹಿತ ಸುದ್ದಿ ಪ್ರಸಾರ ಮಾಡಿತ್ತು. ಇವರು ಕಾಟಿಪಳ್ಳದಲ್ಲಿ ದ್ವಿಚಕ್ರ ವಾಹನ ಕಳವುಗೈಯುತ್ತಿದ್ದ ಆರೋಪಿಗಳು ಎಂದು ಸುರತ್ಕಲ್ ನಾಗರೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News