ಮಂಗಳೂರಿನ ನದಿಗಳ ರೇಖಾಚಿತ್ರಗಳ ವಿಶಿಷ್ಟ ಕಲಾ ಯೋಜನೆಗೆ ಚಾಲನೆ

Update: 2022-09-26 14:30 GMT

ಮಂಗಳೂರು, ಸೆ.26: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಚ್)ನ ಮಂಗಳೂರು ಅಧ್ಯಾಯ ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ಕಲಾವಿದ ಜೀವನ್ ಸಾಲಿಯಾನ್ ಅವರಿಂದ ಮಂಗಳೂರಿನ ನದಿಗಳ ರೇಖಾಚಿತ್ರದ ವಿಶಿಷ್ಟ ಕಲಾ ಯೋಜನೆಗೆ ವಿಶ್ವ ನದಿಗಳ ದಿನವಾದ ಸೆ.೨೫ರ ರವಿವಾರ ನಗರ ಹೊರವಲಯದ ಬೆಂಗ್ರೆ ಬಿಎಂಎಸ್ ಫೆರಿ ಪಾಯಿಂಟ್‌ನಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬೋಳೂರು ಅಮೃತ ವಿದ್ಯಾಲಯದ ಕ್ಯಾಂಪಸ್ ನಿರ್ದೇಶಕ ಯತೀಶ್ ಬೈಕಂಪಾಡಿ ಮತ್ತು ತೋಟಬೆಂಗ್ರೆ ಮಹಾಜನ ಸಭಾದ ಅಧ್ಯಕ್ಷ ಕೇಶವ ಕರ್ಕೇರ ಭಾಗವಹಿಸಿದ್ದರು.

ಕಲಾವಿದ ಜೀವನ್ ಸಾಲಿಯಾನ್ ಮಾತನಾಡಿ ಪ್ರಕೃತಿಯನ್ನು ಚಿತ್ರಿಸುವಲ್ಲಿ ಉತ್ತಮ ಅನುಭವವನ್ನು ಹೊಂದಿರು ವುದರಿಂದ ಈ ಪ್ರದೇಶದ ನಿರ್ಲಕ್ಷಿಸಲ್ಪಟ್ಟ ನೈಸರ್ಗಿಕ ಮತ್ತು ನಿರ್ಮಿತ ಪರಂಪರೆಯತ್ತ ಗಮನ ಸೆಳೆಯಲು ಈ ಕಲಾ ಯೋಜನೆಯನ್ನು ಕಲ್ಪಿಸಿದೆ ಎಂದು ಹೇಳಿದರು.

ಸ್ಥಳೀಯ ಮಕ್ಕಳು ತಮ್ಮದೇ ಆದ ರೇಖಾಚಿತ್ರಗಳನ್ನು ರಚಿಸುವ ಮೂಲಕ ಗಮನ ಸೆಳೆದರು. ಮಂಗಳೂರಿನ ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆರ್ಟ್‌ನ ಉಪನ್ಯಾಸಕ ಸೈಯದ್ ಆಸಿಫ್ ಅಲಿ ಮಕ್ಕಳಿಗೆ ಮಾರ್ಗ ದರ್ಶನ ನೀಡಿದರು.

ಮಾಜಿ ಕಾರ್ಪೊರೇಟರ್ ಮೀರಾ ಕರ್ಕೇರ, ಬೆಂಗ್ರೆ ಜಿಪಂ ಹಿರಿಯ ಪ್ರಾಥಮಿಕ ಶಾಲಾ ಸಮಿತಿಯ ಅಧ್ಯಕ್ಷ ರಾಕೇಶ್ ಸುವರ್ಣ, ಶಾಲಾ ಶಿಕ್ಷಕಿಯರಾದ ಸುಮಾ ಮತ್ತು ಅಶ್ವಿನಿ, ಸುಭಾಸ್ ಚಂದ್ರ ಬಸು, ನೇಮಿರಾಜ್ ಶೆಟ್ಟಿ, ಆರ್ಕಿಟೆಕ್ಟ್ ನಿರೇನ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ರಾಜೇಂದ್ರ ಕೇದಿಗೆ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News