ಸಂಸದೆ ಶೋಭಾರನ್ನು ಹುಡುಕಿ ಸೆಲ್ಫಿ ತೆಗೆದವರಿಗೆ ಬಹುಮಾನ: ಮಿಥುನ್ ರೈ

Update: 2022-09-27 15:25 GMT

ಉಡುಪಿ, ಸೆ.27: ಕೇಂದ್ರ, ರಾಜ್ಯ ಸರಕಾರ ಹಾಗೂ ಉಡುಪಿ ನಗರಸಭೆಯ ವಿರುದ್ಧ ಹಾಗೂ ರಾಷ್ಟ್ರೀಯ ಹೆದ್ದಾರಿ ಮತ್ತು ಉಡುಪಿ ಪ್ರಮುಖ ರಸ್ತೆಗಳನ್ನು ದುರಸ್ತಿಗೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಂಗಳವಾರ ಕಲ್ಮಾಡಿ ಜಂಕ್ಷನ್‌ನಿಂದ ಕರಾವಳಿ ಬೈಪಾಸ್‌ವರೆಗೆ ವಿನೂತನ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕರಾವಳಿ ಬೈಪಾಸ್ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಯುವ ಮುಖಂಡ ಮಿಥುನ್ ರೈ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಅ.7ರಿಂದ 14ರೊಳಗೆ ಉಡುಪಿ, ಕಾಪು, ಕುಂದಾಪುರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡರೆ ಸೆಲ್ಫಿ ತೆಗೆದು ಕಳುಹಿಸಿಕೊಡಿ. ಈ ರೀತಿ ಕಳುಹಿಸಿಕೊಟ್ಟ ಮೊದಲ ವಿಜೇತ 5 ಮಂದಿಗೆ ತಲಾ 5 ಸಾವಿರ ಬಹುಮಾನವಾಗಿ ನೀಡಲಾಗುವುದು. ಆ ಬಳಿಕವೂ ಕರಂದ್ಲಾಜೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದಿದ್ದರೆ ಎಲ್ಲಾ ಪೊಲೀಸ್ ಠಾಣೆಯಲ್ಲೂ ನಾಪತ್ತೆ ದೂರು ದಾಖಲಿಸಲಾಗುವುದು. ಸಂಸದರನ್ನು ಹುಡುಕಿ ಕೊಡಿ ಎಂಬ ಪೋಸ್ಟರ್ ಅಂಟಿಸಲಾಗುವುದು ಎಂದರು.

ಉಡುಪಿಗೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಇರುವವರೆಗೆ ಕ್ಷೇತ್ರ ಉದ್ಧಾರ ಆಗಲ್ಲ. ರಾಜ್ಯ ಬಿಜೆಪಿ ಸರಕಾರ ನಿದ್ರೆಯ ಮಂಪರಿ ನಲ್ಲಿದೆ. ಗುತ್ತಿಗೆದಾರರು ರಘುಪತಿ ಭಟ್ ಹಾಗೂ ಶೋಭಾ ಕರಂದ್ಲಾಜೆಗೆ ಶೇ.40 ಕಮಿಷನ್ ಕೊಟ್ಟಿಲ್ಲ ಎಂದೆ ರಸ್ತೆ ದುರಸ್ತಿಗೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಗಾಂಧೀಜಿಯ ಮೂರು ಮಂಗನಂತೆ ರಘುಪತಿ ಭಟ್, ಶೋಭಾ ಕರಂದ್ಲಾಜೆ, ಸುನೀಲ್ ಕುಮಾರ್ ಬೊಮ್ಮಾಯಿಯ ಮಂಗಗಳು ಎಂದು ವ್ಯಂಗ್ಯವಾಡಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಅಮೃತ್ ಶೆಣೈ, ದಿನೇಶ್ ಪುತ್ರನ್, ಬಿ.ನರಸಿಂಹ ಮೂರ್ತಿ, ಯತೀಶ್ ಕರ್ಕೇರ, ಉದ್ಯಾವರ ನಾಗೇಶ್ ಕುಮಾರ್, ಆನಂದಿ, ಅಣ್ಣಯ್ಯ ಶೇರಿಗಾರ್, ಪ್ರಶಾಂತ್ ಜತ್ತನ್ನ, ಮೀನಾಕ್ಷಿ ಮಾಧವ ಬನ್ನಂಜೆ, ಫಾ.ವಿಲಿಯಂ ಮಾರ್ಟಿಸ್, ಗಣೇಶ್ ನೆರ್ಗಿ, ವೆರೆನಿಕಾ ಕರ್ನೇಲಿಯೋ, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ದಿನೇಶ್ ಪುತ್ರನ್, ಬಿ.ಕುಶಲ ಶೆಟ್ಟಿ, ಸುರಯ್ಯ ಅಂಜಮ್, ಲೂವಿಸ್ ಲೋಬೊ,  ನಾರಾಯಣ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಕಂಬಳದ ಕೋಣ, ಡೋಲು, ಪಟಾಕಿ ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News