ವಿಜ್ಞಾನಿಗಳಿಗೆ ನೀಡುವ 300ಕ್ಕೂ ಅಧಿಕ ಪ್ರಶಸ್ತಿಗಳಿಗೆ ಕತ್ತರಿ

Update: 2022-09-27 16:40 GMT
photo :Ajay Bhalla(@ViharWikipedia/ Twitter)

ಹೊಸದಿಲ್ಲಿ,ಸೆ.27: ಎಂಟು ವಿಜ್ಞಾನ ಮತ್ತು ಆರೋಗ್ಯ ಇಲಾಖೆಗಳು ನೀಡುತ್ತಿರುವ 300ಕ್ಕೂ ಅಧಿಕ ಪ್ರಶಸ್ತಿಗಳನ್ನು ನಿಲ್ಲಿಸುವಂತೆ ಮತ್ತು ನಿಜವಾಗಿಯೂ ಅರ್ಹ ಅಭ್ಯರ್ಥಿಗಳಿಗಾಗಿ ಉನ್ನತ ಸ್ಥಾನಮಾನದ ಪ್ರಶಸ್ತಿಯನ್ನು ಸ್ಥಾಪಿಸುವಂತೆ ಕೇಂದ್ರ ಗೃಹಸಚಿವಾಲಯವು ಅವುಗಳಿಗೆ ಸೂಚಿಸಿದೆ.

ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಅವರು ಸೆ.16ರಂದು ವಿಜ್ಞಾನ ಮತ್ತು ಆರೋಗ್ಯ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರೊಂದಿಗೆ ಸಮಾಲೋಚಿಸಿ ನೊಬೆಲ್ ಪುರಸ್ಕಾರದ ಮಾದರಿಯಲ್ಲಿ ವಿಜ್ಞಾನಿಗಳಿಗಾಗಿ ‘ವಿಜ್ಞಾನ ರತ್ನ ’ಪ್ರಶಸ್ತಿಯನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ.

ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವಸ್ತುನಿಷ್ಠತೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಮೂಡಿಸಲು ಪ್ರಶಸ್ತಿಗಳ ಇಡೀ ಪರಿಸರ ವ್ಯವಸ್ಥೆಯ ಪರಿವರ್ತನೆಗೆ ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಉನ್ನತ ಮಟ್ಟದ ಶಾಂತಿಸ್ವರೂಪ ಭಟ್ನಾಗರ್ ಪ್ರಶಸ್ತಿಗಳ ನೀಡಿಕೆಯನ್ನು ಮುಂದುವರಿಸುವಂತೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್)ಗೆ ಸೂಚಿಸಿರುವ ಭಲ್ಲಾ,ಆದರೆ ಪ್ರಶಸ್ತಿ ಪುರಸ್ಕತರಿಗೆ ಮಾಸಿಕ 15,000 ರೂ.ಗಳ ಗೌರವಧನವನ್ನು 15 ವರ್ಷಗಳಿಗೆ ಸೀಮಿತಗೊಳಿಸುವಂತೆ ತಿಳಿಸಿದ್ದಾರೆ.

ಎಲ್ಲ ಖಾಸಗಿ ದತ್ತಿ,ಉಪನ್ಯಾಸ/ಸ್ಕಾಲರ್‌ಶಿಪ್/ಫೆಲೋಶಿಪ್ ಮತ್ತು ಆಂತರಿಕ ಪ್ರಶಸ್ತಿಗಳನ್ನು ಮುಂದುವರಿಸದಂತೆ 200ಕ್ಕೂ ಅಧಿಕ ಪ್ರಶಸ್ತಿಗಳನ್ನು ನೀಡುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸೂಚಿಸಲಾಗಿದೆ. ಪೂರ್ಣ ಸಮರ್ಥನೆ ಮತ್ತು ಸೂಕ್ತ ಗೌರವಧನದೊಂದಿಗೆ ಸ್ಕಾಲರ್‌ಶಿಪ್/ಫೆಲೋಶಿಪ್‌ಗಳ ವಿತರಣೆಗಾಗಿ ಹೊಸ ಯೋಜನೆಯನ್ನು ಆರಂಭಿಸುವಂತೆ ಮತ್ತು ಆಂತರಿಕ ಪ್ರಶಸ್ತಿಗಳನ್ನು ಈ ಯೋಜನೆಯಲ್ಲಿ ವಿಲೀನಗೊಳಿಸುವಂತೆಯೂ ಅದಕ್ಕೆ ತಿಳಿಸಲಾಗಿದೆ.

ಎಲ್ಲ ಸಚಿವಾಲಯಗಳು ನೀಡುತ್ತಿರುವ ಪ್ರಶಸ್ತಿಗಳನ್ನು ತರ್ಕಬದ್ಧಗೊಳಿಸುವಂತೆ ಗೃಹ ಕಾರ್ಯದರ್ಶಿಗಳು ಕಳೆದ ಮೇ ತಿಂಗಳಿನಲ್ಲಿ ಅವುಗಳಿಗೆ ಸೂಚಿಸಿದ್ದರು.

 ಪ್ರತಿ ವರ್ಷ 51 ನರ್ಸ್‌ಗಳಿಗೆ ನೀಡಲಾಗುತ್ತಿರುವ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳ ಸಂಖ್ಯೆಗೆ ಮಿತಿ ಹೇರುವಂತೆ ಮತ್ತು ಬಿ.ಸಿರಾಯ್ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ನೀಡುತ್ತಿರುವ ಮೂರು ಪ್ರಶಸ್ತಿಗಳನ್ನು ಮರುಪರಿಶೀಲಿಸಿ ಅತ್ಯುನ್ನತ ಮಟ್ಟದ ಹೊಸ ಪ್ರಶಸ್ತಿಯನ್ನು ಸ್ಥಾಪಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.

32 ದತ್ತಿ ಪ್ರಶಸ್ತಿಗಳು ಸೇರಿದಂತೆ 37 ಪ್ರಶಸ್ತಿಗಳನ್ನು ರದ್ದುಗೊಳಿಸುವಂತೆ ಆರೋಗ್ಯ ಸಂಶೋಧನೆ ಇಲಾಖೆಗೆ ಸೂಚಿಸಿರುವ ಗೃಹ ಕಾರ್ಯದರ್ಶಿಗಳು ಕಲಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಅಲ್ಪಾವಧಿಯ ಸ್ಟುಡೆಂಟ್‌ಶಿಪ್ ಎಕ್ಸ್‌ಲನ್ಸ್ ಅವಾರ್ಡ್‌ನ್ನು ಸಂಶೋಧನಾ ಅನುದಾನವನ್ನಾಗಿ ಪರಿವರ್ತಿಸುವಂತೆ ಸೂಚಿಸಿದ್ದಾರೆ.

ಹಾಲಿ ಅಸ್ತಿತ್ವದಲ್ಲಿರುವ ಪ್ರಶಸ್ತಿಗಳನ್ನು ರದ್ದುಗೊಳಿಸಿ ಉನ್ನತ ಮಟ್ಟದ ಹೊಸ ಪ್ರಶಸ್ತಿಗಳನ್ನು ಸ್ಥಾಪಿಸುವಂತೆ ಭೂ ವಿಜ್ಞಾನಗಳ ಸಚಿವಾಲಯ, ಬಾಹ್ಯಾಕಾಶ ಇಲಾಖೆ ಮತ್ತು ಅಣುಶಕ್ತಿ ಇಲಾಖೆಗೆ ಸೂಚಿಸಲಾಗಿದೆ.

ಈ ಸಂಬಂಧ ಪುನರ್‌ಪರಿಶೀಲನಾ ಸಭೆಯನ್ನು ಪ್ರಧಾನಿ ಕಚೇರಿಯು ಶೀಘ್ರ ನಡೆಸಲಿದೆ ಎಂದು ಗೃಹ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News