ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಿದ ನಾಸಾ

Update: 2022-09-27 17:50 GMT

ಕ್ಯಾಲಿಫೋರ್ನಿಯ, ಸೆ. 27: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯ ಬಾಹ್ಯಾಕಾಶ ನೌಕೆಯೊಂದು ಭೂಮಿಯಿಂದ 1.09 ಕೋಟಿ ಕಿಲೋಮೀಟರ್ ದೂರದಲ್ಲಿರುವ ಕ್ಷುದ್ರಗ್ರಹವೊಂದಕ್ಕೆ ಅಪ್ಪಳಿಸಿದೆ. ಇಂಥ ಢಿಕ್ಕಿಗಳ ಮೂಲಕ ಬೃಹತ್ ಬಾಹ್ಯಾಕಾಶ ಬಂಡೆಗಳನ್ನು ಅವುಗಳ ಪಥದಿಂದ ಸ್ವಲ್ಪವಾದರೂ ಹೊರಕ್ಕೆ ದೂಡಲು ಸಾಧ್ಯವಾಗಬಹುದೇ ಎನ್ನುವುದನ್ನು ಪರೀಕ್ಷಿಸುವುದಕ್ಕಾಗಿ ನಾಸಾ ಈ ಪ್ರಯೋಗವನ್ನು ಮಾಡಿದೆ.

ಫುಟ್ಬಾಲ್ ಮೈದಾನದಷ್ಟು ಗಾತ್ರದ ಕ್ಷುದ್ರ ಗ್ರಹವೊಂದಕ್ಕೆ ಗಂಟೆಗೆ 22,530 ಕಿ.ಮೀ. ವೇಗದಲ್ಲಿ ಢಿಕ್ಕಿ ಹೊಡೆಸುವ ನಿರ್ದಿಷ್ಟ ಉದ್ದೇಶಕ್ಕಾಗಿಯೇ ನಾಸಾವು ತನ್ನ ‘ಡಾರ್ಟ್’ ಬಾಹ್ಯಾಕಾಶ ನೌಕೆಯನ್ನು 2021 ನವೆಂಬರ್‌ನಲ್ಲಿ ಉಡಾಯಿಸಿತ್ತು.

ಕ್ಷುದ್ರಗ್ರಹಗಳು ಅಪಾಯಕಾರಿ ರೀತಿಯಲ್ಲಿ ಅಪ್ಪಳಿಸುವ ಸಾಧ್ಯತೆಗಳಿಂದ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಾಸಾ ನಡೆಸಿದ ಮೊದಲ ಪ್ರಯೋಗ ಇದಾಗಿದೆ. ‘ಡಿಮೊರ್‌ಫೋಸ್’ ಎಂಬ ಈ ನಿರ್ದಿಷ್ಟ ಕ್ಷುದ್ರಗ್ರಹವು ಭೂಮಿಯತ್ತ ಧಾವಿಸುತ್ತಿರಲಿಲ್ಲ. ಕ್ಷುದ್ರಗ್ರಹವೊಂದರ ಮೇಲೆ ಪಥ ವಿಮುಖ ಪ್ರಯೋಗವನ್ನು ಮಾಡುವುದಕ್ಕಾಗಿ ಅದನ್ನು ನಾಸಾವು ಆರಿಸಿತು. ಅಳತೆಗಳಲ್ಲಿ ಕ್ಷುದ್ರಗ್ರಹದ ಪಥವು ಸ್ವಲ್ಪವಾದರೂ ಬದಲಾವಣೆಯಾಗಿರುವುದು ಪತ್ತೆಯಾದರೆ, ಈ ಯೋಜನೆ ಯಶಸ್ವಿಯಾಗಿದೆ ಎಂಬುದಾಗಿ ನಾಸಾ ಭಾವಿಸುತ್ತದೆ.

ಈ ಅಳತೆ ಪೂರ್ಣಗೊಳ್ಳಲು ದಿನಗಳು ಅಥವಾ ವಾರಗಳೇ ಬೇಕಾಗಬಹುದು. ಢಿಕ್ಕಿ ಹೊಡೆಯುವ ಕ್ಷಣಗಳ ಮೊದಲು, ಬಾಹ್ಯಾಕಾಶ ನೌಕೆಯಲ್ಲಿದ್ದ ಕ್ಯಾಮರವೊಂದು ಕ್ಷುದ್ರಗ್ರಹದ ಚಿತ್ರವನ್ನು ಹತ್ತಿರದಿಂದ ಸೆರೆಹಿಡಿದಿದೆ. ಚಿತ್ರವು ಕ್ಷುದ್ರಗ್ರಹದಲ್ಲಿರುವ ಬಂಡೆಗಲ್ಲುಗಳನ್ನು ಅತ್ಯಂತ ಹತ್ತಿರದಿಂದ ಸೆರೆಹಿಡಿದಿದೆ. ಬಳಿಕ ನಾಸಾವು ನೌಕೆಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News