ಅತಿಥಿ ಶಿಕ್ಷಕರಿಗೆ ದಸರಾ ಹಬ್ಬ ಮುಗಿಯುವುದರೊಳಗೆ ವೇತನಕ್ಕೆ ಪಾವತಿಸದಿದ್ದಲ್ಲಿ ಧರಣಿ: ಎಸ್.ಎಲ್. ಭೋಜೇಗೌಡ

Update: 2022-09-29 10:21 GMT

ಮಂಗಳೂರು, ಸೆ. 29: ಕಳೆದ ಐದು ತಿಂಗಳಿನಿಂದ ವೇತನ ಸಿಗದೆ ತೀರಾ ಅತಂತ್ರ ಸ್ಥಿತಿಯಲ್ಲಿರುವ ಅತಿಥಿ ಶಿಕ್ಷಕರ ಬಗ್ಗೆ ಸದನದ ಗಮನಸೆಳೆಯಲಾಗಿದೆ. ದಸರಾ ಹಬ್ಬ ಮುಗಿಯುವುದರೊಳಗೆ ಅವರಿಗೆ ಬಾಕಿ ವೇತನ ಪಾವತಿ ಮಾಡದಿದ್ದರೆ ಅ.6ರಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸುವುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ಭೋಜೇಗೌಡ ಎಚ್ಚರಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಗಾಗಲೇ ಅತಿಥಿ ಶಿಕ್ಷಕರ ವೇತನವನ್ನು 10ರಿಂದ 7 ತಿಂಗಳಿಗೆ ಕಡಿತ ಮಾಡಲಾಗಿದೆ. ಆದರೆ ಅದನ್ನು ಕನಿಷ್ಠ 10 ತಿಂಗಳಿಗೆ ಏರಿಸಬೇಕು ಎಂದು ಆಗ್ರಹಿಸಲಾಗಿದೆ. ಮಾತ್ರವಲ್ಲದೆ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆಯೂ ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟವರ ಗಮನಸೆಳೆಯಲಾಗಿದೆ. ಮುಖ್ಯಮಂತ್ರಿಯವರು ವೇತನ ಪಾವತಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರೂ ಇಲಾಖೆಯಿಂದ ಶಿಕ್ಷಕರಿಗೆ ವೇತನ ಬಿಡುಗಡೆಯಾಗುತ್ತಿಲ್ಲ ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಶೇ.45ರಷ್ಟು ಶಿಕ್ಷಕರ ಕೊರತೆ ಇದೆ. ಕಾಲೇಜುಗಳಲ್ಲಿ ಶೇ.20ರಷ್ಟು ಮಾತ್ರವೇ ಖಾಯಂ ಉಪನ್ಯಾಸಕರಿದ್ದು, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳೂ ಅತಿಥಿ ಶಿಕ್ಷಕರನ್ನೇ ಅವಲಂಬಿಸಿದೆ. ಈ ನಡುವೆ ದೇಶದಲ್ಲಿ ರಾಜ್ಯದಲ್ಲಿ ಮೊದಲು ಎಂಬಂತೆ ಎನ್‌ಇಪಿ ಜಾರಿಗೆ ಉತ್ಸಾಹದಲ್ಲಿರುವ ರಾಜ್ಯ ಸರಕಾರ ಶಿಕ್ಷಕರು ಸೇರಿದಂತೆ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದೆ ಗುಣಮಟ್ಟದ ಶಿಕ್ಷಣ ಕೊಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಪ್ರಾಕೃತಿಕ ವಿಕೋಪದಿಂದ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ಥಗೊಂಡಿದೆ. ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ಸಮರ್ಪಕ ಚರ್ಚೆ ನಡೆದಿಲ್ಲ. ದ.ಕ. ಜಿಲ್ಲೆ ಸೇರಿದಂತೆ ಈವರೆಗೂ ಅಧಿಕಾರಿಗಳು ಆಯಾ ಜಿಲ್ಲೆಗಳಲ್ಲಿ ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಅಂದಾಜು ಪಟ್ಟಿ ತಯಾರಿಸಿಲ್ಲ. ತರಕಾರಿ, ಬೇಳೆಕಾಳು, ಭತ್ತ, ರಾಗಿ, ಜೋಳ ಸೇರಿದಂತೆ ಆಹಾರ ಧಾನ್ಯಗಳ ಬಿತ್ತನೆ ಕಾರ್ಯ ಈಗ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಕೃಷಿಯನ್ನು ನಂಬಿರುವ ಜನರು ಈ ವರ್ಷ ಆದಾಯವನ್ನೇ ಕಂಡಿಲ್ಲ. ಸೇತುವೆಗಳು ಕೊಚ್ಚಿ ಹೋಗಿವೆ. ರಸ್ತೆಗಳು ಹಾಳಾಗಿವೆ. ಮನೆಗಳು ನಾಶವಾಗಿವೆ. 2019ರಿಂದ ರಾಜ್ಯಾದ್ಯಂತ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ತೊಂದರೆಯಾಗುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಮಾತ್ರವಲ್ಲದೆ, ತಜ್ಞರು ಸೂಕ್ತ ಪರಿಹಾರವನ್ನು ನೀಡುವಲ್ಲಿ ಸೋತಿದ್ದಾರೆ ಎಂದು ಭೋಜೇಗೌಡ ಆರೋಪಿಸಿದರು.

ಸರಕಾರ ಕೂಡಲೇ ಪ್ರಾಕೃತಿಕ ವಿಕೋಪದಿಂದ ನಷ್ಟ ಸಂಭವಿಸಿರುವ ರೈತರಿಗೆ ಪರಿಹಾರ ಒದಗಿಸಬೇಕು. ಈ ಹಿಂದೆ ಕುಮಾರಸ್ವಾಮಿ  ಮುಖ್ಯಮಂತ್ರಿಯಾಗಿದ್ದ ವೇಳೆ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತದಿಂದ ಹಾನಿಗೊಳಗಾಗಿದ್ದವರಿಗೆ ತಲಾ 12 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿತ್ತು. ಅಂತಹ 1,200 ಮನೆಗಳ ಉದ್ಘಾಟನೆಯನ್ನು ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪ ಮಾಡಿದ್ದರು. ಆದರೆ ಆ ಬಳಿಕದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದವರಿಗೆ ಶಾಶ್ವತ ಮನೆ ನಿರ್ಮಾಣ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಐದು ಲಕ್ಷ ರೂ.ಗಳ ಪರಿಹಾರ ನೀಡಿದರೆ ಅದರಿಂದ ಮನೆ ನಿರ್ಮಾಣ ಸಾಧ್ಯವಾಗದು ಎಂದು ಅವರು ಹೇಳಿದರು.

ಎನ್‌ಡಿಆರ್‌ಎಫ್‌ನಡಿ ಪ್ರಾಥಮಿಕ ಶಾಲೆಗಳಿಗೆ ಹಾನಿಯಾಗಿದ್ದಲ್ಲಿ ಮಾತ್ರವೇ ಪರಿಹಾರ ಒದಗಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಹಾಗಿದ್ದರೆ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾಗಿರುವ ಹೈಸ್ಕೂಲ್ ಮತ್ತು ಕಾಲೇಜು ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯಗಳಿಗೆ ಪರಿಹಾರ ಎಲ್ಲಿಂದ ಎಂದು ಭೋಜೇಗೌಡ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾಕೆ ಮಾಧವ ಗೌಡ, ಅಕ್ಷಿತ್ ಸುವರ್ಣ, ರತೀಶ್, ರಮೀಝಾ ಬಾನು, ಇಕ್ಬಾಲ್ ಅಹ್ಮದ್ ಮುಲ್ಕಿ ಉಪಸ್ಥಿತರಿದ್ದರು.


ನವೆಂಬರ್ 1ರಿಂದ ಪಂಚರತ್ನ ಯೋಜನೆಯ ಅರಿವು

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಶಿಕ್ಷಣ, ಆರೋಗ್ಯ, ಕೃಷಿ, ವಸತಿ, ಯುವ ಸಬಲೀಕರಣ- ಉದ್ಯೋಗ ಎಂಬ ಪಂಚರತ್ನ ಯೋಜನೆಯ ಬಗ್ಗೆ ತಾಲೂಕು ಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ನವೆಂಬರ್ 1ರಿಂದ ಆರಂಭಿಸಲಾಗುವುದು ಎಂದು ಎಸ್.ಎಲ್. ಭೋಜೇಗೌಡ ಹೇಳಿದರು.

ಪಿಎಫ್‌ಐ ಹಾಗೂ ಸಹ ಸಂಘಟನೆಗಳ ನಿಷೇಧ ಹಾಗೂ ನಾಯಕರ ಮೇಲಿನ ದಾಳಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಂಸ್ಥೆ ಅಥವಾ ಸಂಘಟನೆಗಳು ಅಥವಾ ವೈಯಕ್ತಿಕವಾಗಿ ಪ್ರಚೋದನಾಕಾರಿ ಭಾಷಣ ಮಾಡುವುದು, ಜನರನ್ನು ರೊಚ್ಚಿಗೆಬ್ಬಿಸುವುದು, ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಿದ್ದಲ್ಲಿ ಅಂಥವರ ಮೇಲೆ ಕಾನೂನು ಕ್ರಮಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಅದು ಆರೆಸ್ಸೆಸ್, ಪಿಎಫ್‌ಐ ಅಥವಾ ನಮ್ಮದೇ ಯಾವುದೇ ಸಂಘಟನೆ, ಸಂಸ್ಥೆ ಆಗಿದ್ದರೂ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆರೆಸ್ಸೆಸ್ ನಿಷೇಧಕ್ಕೆ ಒತ್ತಾಯಿಸಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಂಘಟನೆ, ಸಂಸ್ಥೆಗಳ ನಿಷೇಧದ ಬಗ್ಗೆ ಪುರಾವೆಗಳನ್ನು ಸಮಾಜದ ಮುಂದಿಡಬೇಕು. ಪಿಎಫ್‌ಐ ನಿಷೇಧದ ಬಗ್ಗೆ ಸರಕಾರ ನೀಡಿರುವ ಕಾರಣಗಳು ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅದರಂತೆಯೇ ಇತರ ಸಂಘಟನೆ, ಸಂಸ್ಥೆಗಳ ಬಗ್ಗೆ ಪುರಾವೆಗಳಿದ್ದಲ್ಲಿ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ಒದಗಿಸಬಹುದು. ಆದರೆ ಪುರಾವೆಗಳನ್ನು ಕೇವಲ ರಾಜಕೀಯ ಹೇಳಿಕೆಗಳನ್ನು ನೀಡಬಾರದು ಎಂದು ಎಸ್.ಎಲ್. ಬೋಜೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News