ಕೃತಕ ಉಸಿರಾಟದ ಬಗ್ಗೆ ಶಾಲಾ ಪಠ್ಯಗಳಲ್ಲಿ ಅಳವಡಿಸಲು ಹೃದ್ರೋಗ ತಜ್ಞರ ಆಗ್ರಹ

Update: 2022-09-29 16:32 GMT

ಮಂಗಳೂರು, ಸೆ.29: ಸಣ್ಣ ಪ್ರಾಯದಲ್ಲೇ ಹೃದಯಸ್ತಂಭನ ತಡೆಗಟ್ಟುವ ಸಲುವಾಗಿ ಪ್ರಾಥಮಿಕ ಚಿಕಿತ್ಸೆಯಾದ ಕೃತಕ ಉಸಿರಾಟ (ಸಿಪಿಆರ್)ದ ಬಗ್ಗೆ ಶಾಲಾ ಪಠ್ಯಗಳಲ್ಲಿ ಅಳವಡಿಸಿ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ನಗರದ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಗುರುವಾರ ಕೆಎಂಸಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಸ್ಪತ್ರೆಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್, ಹೃದಯಾಘಾತವಾದ ಕೂಡಲೇ 10 ನಿಮಿಷದೊಳಗೆ ಕೃತಕ ಉಸಿರಾಟಕ್ಕೆ ಶಕ್ತಿಮೀರಿ ಪ್ರಯತ್ನಿಸಬೇಕು. ಅಲ್ಲದೆ ಸಮೀಪದ ಆಸ್ಪತ್ರೆಗೆ ದಾಖಲಿಸಬೇಕು. ಚಿಕಿತ್ಸೆಗೂ ಮೊದಲು ಕೃತಕ ಉಸಿರಾಟ ಮೂಲಕ ಪ್ರಾಥಮಿಕ ಹಂತದಲ್ಲಿ ಜೀವ ಉಳಿಸುವ ಬಗ್ಗೆ ತಿಳಿದಿದ್ದರೆ ಪ್ರಾಣಾಪಾಯದಿಂದ ತಪ್ಪಿಸಬಹುದು. ಈ ವಿಚಾರ ಶಾಲಾ ಪಠ್ಯಗಳಲ್ಲಿ ಇಲ್ಲ. ಕನಿಷ್ಠ ಏಳನೇ ತರಗತಿ ನಂತರದ ಪಠ್ಯಗಳಲ್ಲಿ ಇದರ ಬಗ್ಗೆ ಹೆಚ್ಚಿನ ಒತ್ತು ನೀಡಿದಲ್ಲಿ ಹೃದಯ ಸ್ತಂಭನ ತಡೆ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದ.ಕ.ಜಿಲ್ಲೆಯ 22 ಶಾಲೆಗಳಲ್ಲಿ ಸಿಪಿಆರ್ ಕಾರ್ಯಕ್ರಮವನ್ನು ಸೆಪ್ಟೆಂಬರ್‌ನಲ್ಲಿ ನಡೆಸಲಾಗಿದೆ. ಶಾಲಾ ಕಾಲೇಜು ಶಿಕ್ಷಕರು ಮತ್ತು ಸಿಬ್ಬಂದಿಗೆ ಕಾರ್ಯಾಗಾರ ನಡೆಸಲಾಗಿದೆ. ‘ಟೀಚ್ ದ ಟೀಚರ್’ ಹೆಸರಿನಲ್ಲಿ ಈ ಕಾರ್ಯಾಗಾರ ನಡೆಸಲಾಗಿದ್ದು, ಸಿಪಿಆರ್ ಸಹಾಯದಿಂದ ಜೀವ ಉಳಿಸುವುದು ಹೇಗೆ ಎಂಬುದನ್ನು ಕಲಿಸಲಾಗಿದೆ. ಶಿಕ್ಷಕರು ಕೋಲಾಜ್ ಮತ್ತು ಘೋಷಣೆ ಬರೆಯುವ ಸ್ಪರ್ಧೆಯಲ್ಲಿ ಮತ್ತು ಮಕ್ಕಳ ಪಾಲಕರು ಘೋಷಣೆ ಬರೆಯುವ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಆರೋಗ್ಯಕರ ಹೃದಯ ಜಾಗೃತಿ ಸ್ಪರ್ಧೆ ನಡೆಸಲಾಗಿದೆ. ಶಿಶು ವಿಹಾರದಿಂದ ಪಿಯುವರೆಗಿನ ಸುಮಾರು 13700 ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.  ವಿಜೇತರಿಗೆ ಆರೋಗ್ಯಕರ ಹೃದಯದ ಅಭ್ಯಾಸ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಒತ್ತಡ, ಹೃದಯ ಸ್ತಂಭನ ಕಾಯಿಲೆಗಳ ಕುರಿತು ಮಾಹಿತಿಯುಳ್ಳ ಕಿರು ಪುಸ್ತಕ ಹಂಚಲಾಗಿದೆ ಎಂದರು.

ಹೃದ್ರೋಗತಜ್ಞ ಡಾ.ನರಸಿಂಹ ಪೈ ಮಾತನಾಡಿ, ಐಸಿಎಂಆರ್ ವರದಿ ಪ್ರಕಾರ 45 ವರ್ಷಕ್ಕಿಂತ ಕೆಳಗಿನ ಶೇ.10ರಿಂದ ಶೇ.15ರವರೆಗಿನ ಯುವಕರಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯ ಸ್ತಂಭನ ಜಾಸ್ತಿ ಕಂಡುಬರುತ್ತಿದೆ. ಇದಕ್ಕೆ ಆಧುನಿಕ ಜೀವನ ಶೈಲಿ, ಜಂಕ್ ಫುಡ್ ಸೇವನೆ, ಆರೋಗ್ಯದ ಬಗ್ಗೆ ನಿರ್ಲಕ್ಷವೆ ಕಾರಣವಾಗಿದೆ ಎಂದರು.

ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಮಾತನಾಡಿ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದವರಿಗೆ ಹೊರರೋಗಿ ವಿಭಾಗದ ಸೇವೆಯನ್ನು ಸಂಜೆ 5ರಿಂದ ರಾತ್ರಿ 7 ಗಂಟೆ ವರೆಗೆ ವಿಸ್ತರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೃದ್ರೋಗ ತಜ್ಞರಾದ ಡಾ.ಹರೀಶ್ ರಾಘವನ್, ಡಾ.ರಾಜೇಶ್ ಭಟ್, ಡಾ.ಮನೀಷ್ ರೈ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News