ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಲು ಕಾಂಗ್ರೆಸ್ ಮನವಿ

Update: 2022-09-29 16:36 GMT

ಮಂಗಳೂರು, ಸೆ.29: ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಬಿಡುಗಡೆಗೊಳಿಸದೆ ಸರಕಾರ ಅನ್ಯಾಯ ಎಸಗಿದೆ. ಹಾಗಾಗಿ ಬೆಂಗ್ರೆ ವಾರ್ಡ್ ಕಾಂಗ್ರೆಸ್ ಸಮಿತಿಯ ನಿಯೋಗ ವೊಂದು ಗುರುವಾರ ದ.ಕ.ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಕಳೆದ ೪-೫ ವರ್ಷದಿಂದ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಕ್ಕಿಲ್ಲ. ಈ ಬಗ್ಗೆ ಅಧಿಕಾರಿ ಗಳಿಂದಲೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ವಿದ್ಯಾರ್ಥಿ ವೇತನದಿಂದ ಬೆಂಗ್ರೆ ವಾರ್ಡ್‌ನ ಹಲವಾರು ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಬಹುತೇಕ ಅರ್ಜಿಗಳು ಕಡತದಲ್ಲೇ ಬಾಕಿಯಾಗಿದೆ. ಆರ್ಥಿಕ ಸಮಸ್ಯೆಯಿಂದ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಎಸೆಸೆಲ್ಸಿ ಪರೀಕ್ಷೆಯಲ್ಲಿ 500 ಕ್ಕೂ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಕ್ಕಾಗಿ ಹೆಚ್ಚುವರಿ ಧನಸಹಾಯ ಮಾಡುವಂತೆಯೂ ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ. ಬೆಂಗ್ರೆ ವಲಯ ಕಾಂಗ್ರೆಸ್ ಅಧ್ಯಕ್ಷ ಅಬೂಬಕರ್ ಅಶ್ರಫ್, ಮಾಜಿ ಅಧ್ಯಕ್ಷ ಆಸೀಫ್ ಅಹ್ಮದ್, ಪದಾಧಿಕಾರಿಗಳಾದ ಬಿ.ಎಂ.ಶರೀಫ್, ಇಬ್ರಾಹೀಂ, ರಫೀಕ್ ಬೆಂಗರೆ, ಮುಸ್ಲಿಂ ಲೀಗ್ ಮುಖಂಡರಾದ ಬಶೀರ್ ಉಳ್ಳಾಲ, ಮುಹಮ್ಮದ್ ಇಸ್ಮಾಯೀಲ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News