ಪ್ರೈಮರಿ ಮಟ್ಟದ ಮದ್ರಸ ವ್ಯವಸ್ಥೆಗಳ ಬಗ್ಗೆ ಯಾವುದೇ ಗೊಂದಲಗಳಿಲ್ಲ : ಯೂಸುಫ್ ಮಾಣಿ

Update: 2022-10-05 12:27 GMT

ಮಂಗಳೂರು, ಅ.5: ಮದ್ರಸ ಮತ್ತು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಆಯೋಜಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮದ್ರಸಗಳ ಬಗ್ಗೆ ಇರುವ ಗೊಂದಲವನ್ನು ನಿವಾರಿಸಬೇಕಾಗಿದೆ ಎಂದು ಚಿಂತಕ ಯೂಸುಫ್ ಮಾಣಿ ಅಭಿಪ್ರಾಯಪಟ್ಟರು.

ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ ನಗರದ ಸಮಸ್ತ ಸಭಾಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮದ್ರಸ ವಿವಾದದ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಪ್ರಥಮ ಹಂತದ ಮಾತುಕತೆ ನಡೆಸಲಾಗಿದ್ದು, ಲೌಕಿಕ ವಿದ್ಯೆ ನೀಡದೆ ದಿನ ಪೂರ್ತಿ ಕೇವಲ ಧಾರ್ಮಿಕ ಬೋದನೆ ನಡೆಸುವ ಕೇಂದ್ರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳೀಯ ಪ್ರೈಮರಿ ಮಟ್ಟದ  ಮದ್ರಸ ವ್ಯವಸ್ಥೆಗಳ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಯೂಸುಫ್ ಮಾಣಿ ಹೇಳಿದರು.

ದೇಶದಲ್ಲಿ ಕಾರ್ಯಚರಿಸುತ್ತಿರುವ ಮದ್ರಸಗಳ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಸಲಾಗುತ್ತಿದೆ. ಈ ಬಗ್ಗೆ ಜನತೆಗೆ ನೈಜಾಂಶವನ್ನು ತಿಳಿಸಬೇಕಾಗಿದೆ. ಕಾಲದ ಬೇಡಿಕೆಗೆ ತಕ್ಕಂತೆ ಸಮಸ್ತದ ಅಧೀನದ ಇಸ್ಲಾಮಿಕ್ ಮತ ವಿದ್ಯಾಬ್ಯಾಸ ಬೋರ್ಡ್ ಮದ್ರಸ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುತ್ತಲೇ ಬಂದಿದೆ ಎಂದು ಎಸ್.ಬಿ. ದಾರಿಮಿ ಉಪ್ಪಿನಂಗಡಿ ಅಭಿಪ್ರಾಯಪಟ್ಟರು.

ನ್ಯಾಯವಾದಿಗಳಾದ ಲತೀಫ್ ಪುತ್ತೂರು, ಸುಲೈಮಾನ್ ಸುರಿಬೈಲು, ಸಿದ್ದೀಕ್, ಮಾಜಿ ಮೇಯರ್ ಕೆ. ಅಶ್ರಫ್, ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಮುಫತ್ತಿಷರಾದ ಅಬ್ದುಲ್ಲಾ ಫೈಝಿ, ಉಮ್ಮರ್ ದಾರಿಮಿ ಸಾಲ್ಮರ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು ಮಾತನಾಡಿದರು.

ಜಿಲ್ಲಾ ಮದ್ರಸ ಮ್ಯಾನೆಜ್ಮೆಂಟ್ ಅಧ್ಯಕ್ಷ ಐ. ಮೊಹಿದಿನಬ್ಬ ಹಾಜಿ ಅಧ್ಯಕ್ಷತೆ ವಹಿಸಿದ್ದರು.  ’ಸಮಸ್ತ’ ದ ಮದ್ರಸ ಮ್ಯಾನೆಜ್ಮೆಂಟ್‌ನ ಪ್ರತಿನಿಧಿ ಇಬ್ನು ಅದಂ ಕಣ್ಣೂರು, ಮೊಹಿದ್ದೀನ್ ಕಾಳಂಪಾಡಿ ‘ಮಿಗವ್-೨೦೨೨’ ತರಗತಿ ನಡೆಸಿಕೊಟ್ಟರು. ಮೆಟ್ರೋ ಶಾಹುಲ್ ಹಮೀದ್ ಹಾಜಿ,  ಮುಪತ್ತಿಸ್ ಹನೀಫ್ ಮುಸ್ಲಿಯಾರ್, ಖತೀಬ್ ಅಬುಲ್ ಅಕ್ರಂ, ಸೈಯದ್ ಬಾಷಾ ತಂಳ್, ಇಬ್ರಾಹೀಂ ದಾರಿಮಿ ಕಡಬ ಉಪಸ್ಥಿತರಿದ್ದರು.

ಜಿಲ್ಲಾ ಮದ್ರಸ ಮ್ಯಾನೆಜ್ಮೆಂಟ್ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ ಸ್ವಾಗತಿಸಿದರು. ಇಬ್ರಾಹಿಂ ಕೊಣಾಜೆ ವಂದಿಸಿದರು. ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News