ಪ್ರಾಣಿಹಿಂಸೆ ತಡೆಗಟ್ಟಲು ಆಗ್ರಹಿಸಿ ವಿನೂತನ ಸತ್ಯಾಗ್ರಹ

Update: 2022-10-06 14:30 GMT

ಬೆಂಗಳೂರು, ಅ. 6 : ‘ವೀಗನ್ ಇಂಡಿಯಾ ಮೂವ್‍ಮೆಂಟ್’ ವತಿಯಿಂದ ‘ಪ್ರಾಣಿಗಳ ಸ್ವಾತಂತ್ರ್ಯಕ್ಕಾಗಿ’ ನಗರದಲ್ಲಿ ಗುರುವಾರ ವಿನೂತನ ಸತ್ಯಾಗ್ರಹ ನಡೆಸಲಾಯಿತ್ತು.

ಜಗತ್ತಿನಲ್ಲಿ ಪ್ರಾಣಿಗಳ ಮೇಲೆ ಸೌಂದರ್ಯವರ್ಧಕಗಳನ್ನು ಪ್ರಯೋಗ ಮಾಡುವುದನ್ನು ಬಹಿಷ್ಕರಿಸಬೇಕು. ಪ್ರಾಣಿಗಳ ಮೇಲೆ ಪರೀಕ್ಷಿಸಿದ ಇತರ ಉತ್ಪನ್ನಗಳನ್ನು ಬಳಸಬಾರದು. ಪ್ರಾಣಿಗಳ ಚರ್ಮವನ್ನು ಫ್ಯಾಷನ್‍ಗಾಗಿ ಆಯ್ಕೆ ಮಾಡಬಾರದು. ಹಾಗೆಯೇ ಸಾರ್ವಜನಿಕರು ಸರ್ಕಸ್ ಮತ್ತು ಪ್ರಾಣಿಸಂಗ್ರಹಾಲಯಗಳಿಗೆ ಭೇಟಿ ನೀಡಬಾರದು ಎಂದು ಜಾಗೃತಿ ಮೂಡಿಸಲಾಯಿತು. 

ವೀಗನ್ ಇಂಡಿಯಾ ಮೂವ್‍ಮೆಂಟ್‍ನ ಸದಸ್ಯ ದಿಲೀಪ್ ಮಾತನಾಡಿ, ‘ಪ್ರಾಣಿಗಳು 21ನೇ ಶತಮಾನದಲ್ಲಿಯೂ ಮಾನವರ ಕೈಯಲ್ಲಿ ಊಹಿಸಲಾದಷ್ಟು ಭೀಕರ ಕ್ರೂರತೆಯನ್ನು ಅನುಭವಿಸುತ್ತಿವೆ. ಹಾಗಾಗಿ ನಮ್ಮ ಈ ಕಾರ್ಯಕ್ರಮಕ್ಕೆ ‘ಸತ್ಯಾಗ್ರಹ 2.0’ ಎಂದು ಹೆಸರು ಇಡಲಾಗಿದೆ. ದೇಶದಲ್ಲಿ ನಡೆದ ಮೊದಲ ಸತ್ಯಾಗ್ರಹವನ್ನು ಮಾನವ ಸ್ವಾತಂತ್ರ್ಯದ ಹೋರಾಟವೆಂದು ನೆನಪಿಸಿಕೊಳ್ಳಬಹುದಾಗಿದೆ. ವೀಗನಿಸಂ ಅಂದರೆ ಕೇವಲ ಆಹಾರ ಪದ್ಧತಿ ಅಲ್ಲ, ಪ್ರಾಣಿ ಪಕ್ಷಿಗಳನ್ನು ಸರಕುಗಳಂತೆ ನೋಡದೆ, ಅವುಗಳನ್ನೂ ನಮ್ಮಂತೆಯೇ ಭಾವನೆಗಳನ್ನು ಹೊಂದಿರುವ ಜೀವಿಗಳನ್ನಾಗಿ ಗುರುತಿಸುವುದಾಗಿದೆ. ಹಾಗಾಗಿ ಈ ಸತ್ಯಾಗ್ರಹದ ಮೂಲಕ ವಿಷಯದ ಕುರಿತು ಜನರ ಗಮನ ಸೆಳೆಯಲು ಕಾರ್ಯಕ್ರಮವನ್ನು ರೂಪಿಸಿದ್ದೇವೆ’ ಎಂದರು.

ಸಂಘಟಕರಾದ ಲಲಿತಾ ಮಾತನಾಡಿ, ‘ಮಹಾತ್ಮಾ ಗಾಂಧಿ ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಹೋರಾಟವನ್ನು ಪ್ರತಿಪಾದಿಸಿದರು. ಹಾಗೆಯೇ ಮಾನವರನ್ನು ಹೊತುಪಡಿಸಿ ಪ್ರಾಣಿಗಳೂ ಸ್ವಾತಂತ್ರ್ಯಕ್ಕೆ ಅರ್ಹವಾಗಿವೆ. ಹಾಗಾಗಿ ‘ವೀಗನ್ ಇಂಡಿಯಾ ಮೂವ್‍ಮೆಂಟ್’ ವತಿಯಿಂದ ದೇಶದ ಪ್ರಮುಖ ನಗರಗಳಲ್ಲಿ ಪ್ರಾಣಿಗಳ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹವನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News