ಉಡುಪಿ ತಾಯಿ ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳ ಬಾಕಿ ವೇತನ 3.68 ಕೋಟಿ ರೂ. ಬಿಡುಗಡೆ

Update: 2022-10-06 15:54 GMT

ಉಡುಪಿ, ಅ.6: ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಬಾಕಿ ಇರುವ ವೇತನವನ್ನು ಪಾವತಿಸಲು ರಾಜ್ಯ ಸರಕಾರ 228.33 ಲಕ್ಷ ರೂ. ಹಾಗೂ ಇತರ ಬಾಕಿ ಇರುವ ಸಾದಿಲ್ವಾರು ವೆಚ್ಚ 140.37 ಲಕ್ಷ ರೂ. ಸೇರಿದಂತೆ ಒಟ್ಟು 368.70 ಲಕ್ಷ ರೂ. ಭರಿಸಲು ಅನುಮತಿ ನೀಡಿ ಆದೇಶಿಸಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಖಾಸಗಿಯವರು ನಿರ್ವಹಿಸುತ್ತಿದ್ದ 200 ಹಾಸಿಗೆಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರದ ಸುಪರ್ದಿಗೆ ಪಡೆಯಲಾಗಿತ್ತು. ಸರಕಾರದ ಸುಪರ್ದಿಗೆ ಪಡೆಯುವ ಮೊದಲು ಕಾರ್ಯನಿರ್ವಹಿಸಲಾಗಿದ್ದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಬಾಕಿ ವೇತನ ಭತ್ಯೆ ಹಾಗೂ ಇತರ ಬಾಕಿ ಮೊತ್ತ ಭರಿಸಲು ಒಟ್ಟು 3,68,71,724ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಈ ಮೊತ್ತವನ್ನು ತಕ್ಷಣದಲ್ಲಿ ಪಾವತಿಸಲು ಕಳೆದ ಜೂನ್ ತಿಂಗಳಲ್ಲಿ ಶಾಸಕ ಕೆ ರಘುಪತಿ ಭಟ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಲ್ಲಿ ಚರ್ಚಿಸಿ ಮನವಿ ಮಾಡಿದ್ದರು. ಅದರಂತೆ ಮುಖ್ಯಮಂತ್ರಿ ವೇತನ ಬಾಕಿ ಪಾವತಿ ಮಾಡುವುದು ಎಂದು ಷರಾ ಬರೆದು ಆರ್ಥಿಕ ಇಲಾಖೆಗೆ ಸೂಚಿಸಿದ್ದರು. ಇದೀಗ ಆರ್ಥಿಕ ಇಲಾಖೆಯ ಒಪ್ಪಿಗೆಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 368.70 ಲಕ್ಷ ರೂ. ಭರಿಸಲು ಅನುಮತಿ ನೀಡಿ ಈ ಆದೇಶ ಹೊರಡಿಸಿದೆ.

ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಅವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News