ದಿಲ್ಲಿ ಹಿಂಸಾಚಾರಕ್ಕೆ ಕೇಂದ್ರದ ಪ್ರತಿಕ್ರಿಯೆ ಅಸಮರ್ಪಕವಾಗಿತ್ತು:‌ ನಾಗರಿಕರ ಸಮಿತಿ

Update: 2022-10-07 16:20 GMT

 ಹೊಸದಿಲ್ಲಿ,ಅ.7: ಫೆಬ್ರವರಿ 2020ರ ದಿಲ್ಲಿ ಗಲಭೆಗಳಿಗೆ ಕೇಂದ್ರ ಗೃಹ ಸಚಿವಾಲಯದ ಪ್ರತಿಕ್ರಿಯೆ ಸಂಪೂರ್ಣವಾಗಿ ಅಸಮರ್ಪಕವಾಗಿತ್ತು ಎಂದು ನಾಲ್ವರು ಮಾಜಿ ನ್ಯಾಯಾಧೀಶರು ಮತ್ತು ಓರ್ವ ಮಾಜಿ ಐಎಎಸ್ ಅಧಿಕಾರಿ ತಮ್ಮ ವರದಿಯಲ್ಲಿ ಬೆಟ್ಟು ಮಾಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಂ.ಬಿ.ಲೋಕೂರ್ ನೇತೃತ್ವದ ನಾಗರಿಕರ ಸಮಿತಿಯು ‘ಅನಿಶ್ಚಿತ ನ್ಯಾಯ’ ಶೀರ್ಷಿಕೆಯ ವರದಿಯನ್ನು ಸಿದ್ಧಪಡಿಸಿದ್ದು,ಮಾಜಿ ನ್ಯಾಯಾಧೀಶರಾದ ಎ.ಪಿ.ಶಾ,ಆರ್.ಎಸ್.ಸೋಧಿ ಮತ್ತು ಅಂಜನಾ ಪ್ರಕಾಶ ಹಾಗೂ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಸಮಿತಿಯ ಇತರ ಸದಸ್ಯರಾಗಿದ್ದಾರೆ.

2020,ಫೆ.23 ಮತ್ತು 26ರ ನಡುವೆ ಆಗ್ನೇಯ ದಿಲ್ಲಿಯಲ್ಲಿ ಸಿಎಎ ವಿರೋಧಿಗಳು ಮತ್ತು ಬೆಂಬಲಿಗರ ನಡುವೆ ಘರ್ಷಣೆಗಳಿಂದಾಗಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರದ ಮೇಲೆ ವರದಿಯು ಗಮನವನ್ನು ಕೇಂದ್ರೀಕರಿಸಿದೆ. ಈ ಹಿಂಸಾಚಾರದಲ್ಲಿ 53 ಜನರು ಕೊಲ್ಲಲ್ಪಟ್ಟಿದ್ದು, ಹೆಚ್ಚಿನವರು ಮುಸ್ಲಿಮರಾಗಿದ್ದರು. ನೂರಾರು ಜನರು ಗಾಯಗೊಂಡಿದ್ದರು.

ಹಿಂಸಾಚಾರವು ಪ್ರಧಾನಿ ನರೇಂದ್ರ ಮೋದಿ ಸರಕಾರದ ಹೆಸರನ್ನು ಕೆಡಿಸಲು ವ್ಯಾಪಕ ಒಳಸಂಚಿನ ಭಾಗವಾಗಿತ್ತು ಮತ್ತು ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದ್ದವರು ಈ ಸಂಚನ್ನು ರೂಪಿಸಿದ್ದರು ಎಂದು ದಿಲ್ಲಿ ಪೊಲೀಸರು ಪ್ರತಿಪಾದಿಸಿದ್ದು,ಒಳಸಂಚಿನ ಆರೋಪದಲ್ಲಿ ಹಲವಾರು ಮಾನವ ಹಕ್ಕು ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.ಹಿಂಸಾಚಾರ ಸಂಭವಿಸುವುದನ್ನು ತಪ್ಪಿಸಲು ದಿಲ್ಲಿ ಸರಕಾರವು ಸ್ವಲ್ಪ ಮಟ್ಟಿಗೆ ಪ್ರಯತ್ನಿಸಿತ್ತಾದರೂ ದಿಲ್ಲಿ ಪೊಲೀಸರು ಕೇಂದ್ರದ ನಿಯಂತ್ರಣದಲ್ಲಿರುವುದರಿಂದ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಸೀಮಿತ ಸಾಮರ್ಥ್ಯ ಹೊಂದಿತ್ತು ಎಂದು ವರದಿಯು ತಿಳಿಸಿದೆ.

ಒಳಸಂಚು ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಸಾಕ್ಷಗಳು ಭಯೋತ್ಪಾದನೆ ಆರೋಪವನ್ನು ಸಮರ್ಥಿಸಲು ಕಾನೂನಿನ ಅಗತ್ಯವನ್ನು ಪೂರೈಸುವುದಿಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ. ಕೇಂದ್ರ ಗೃಹ ಸಚಿವಾಲಯವು ದಿಲ್ಲಿ ಪೊಲೀಸರು ಮತ್ತು ಕೇಂದ್ರೀಯ ಅರೆಮಿಲಿಟರಿ ಪಡೆಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದರೂ ಕೋಮು ಹಿಂಸಾಚಾರವನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಅದು ವಿಫಲಗೊಂಡಿತ್ತು ಎಂದು ಬೆಟ್ಟು ಮಾಡಿರುವ ವರದಿಯು,ಪೊಲೀಸರು ಫೆ.24 ಮತ್ತು 25ರಂದು ಸಂಕಷ್ಟದಲ್ಲಿ ಸಿಲುಕಿದ್ದ ಜನರ ಹೆಚ್ಚಿನ ದೂರವಾಣಿ ಕರೆಗಳನ್ನು ಸ್ವೀಕರಿಸಿದ್ದರಾದರೂ,ಆ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗಳ ನಿಯೋಜನೆಯನ್ನು ಹೆಚ್ಚಿಸಲಾಗಿರಲಿಲ್ಲ ಎಂದು ಹೇಳಿದೆ.

ಗಲಭೆಗಳನ್ನು ನಡೆಸಲು ಪೂರ್ವಯೋಜಿತ ಪಿತೂರಿಯ ದಿಲ್ಲಿ ಪೊಲೀಸರ ಆರೋಪವು,ಕಾನೂನಿನಲ್ಲಿ ವಿಶ್ವಾಸಾರ್ಹವಲ್ಲದ ವಿವರಿಸಿರದ,ವಿಳಂಬಿತ ಹೇಳಿಕೆಗಳನ್ನು ಆಧರಿಸಿದೆ ಎಂದು ಹೇಳಿರುವ ಸಮಿತಿಯು,ಪಿತೂರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಮತ್ತು ಹಿಂಸಾಚಾರ ಕುರಿತು ಇತರ ಎಫ್ಐಆರ್ಗಳ ನಡುವೆ ಹಲವಾರು ವಿರೋಧಾಭಾಸಗಳು ಮತ್ತು ಅಸಂಗತತೆಗಳಿವೆ ಎಂದು ತಿಳಿಸಿದೆ.

ಹಿಂಸಾಚಾರಕ್ಕೆ ಮುಂಚಿನ ದಿನಗಳಲ್ಲಿ ಬಿಜೆಪಿ ನಾಯಕರು ಸಿಎಎ ವಿರುದ್ಧ ಪ್ರತಿಭಟನಾಕಾರರನ್ನು ದೇಶವಿರೋಧಿ ಮತ್ತು ಹಿಂಸಾತ್ಮಕ ಎಂದು ಬಿಂಬಿಸಿ ವಿಭಜನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಹೇಳಿರುವ ವರದಿಯು,ವ್ಯಾಪಕವಾಗಿ ವೀಕ್ಷಿಸಲಾಗುವ ರಿಪಬ್ಲಿಕ್ ಟಿವಿ,ಟೈಮ್ಸ್ ನೌ,ಆಜ್ತಕ್,ಝೀ ನ್ಯೂಸ್,ಇಂಡಿಯಾ ಟಿವಿ ಮತ್ತು ರಿಪಬ್ಲಿಕ್ ಭಾರತ್ ಸುದ್ದಿವಾಹಿನಿಗಳು ಆಧಾರರಹಿತ ಪಿತೂರಿ ಸಿದ್ಧಾಂತಗಳಿಗೆ ಕುಮ್ಮಕ್ಕು ನೀಡಿದ್ದವು,ಪ್ರತಿಭಟನಾ ತಾಣಗಳಲ್ಲಿ ಬಲವಂತದ ಬಂದ್ಗೆ ಕರೆ ನೀಡಿದ್ದವು ಎಂದು ತಿಳಿಸಿದೆ.

 ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದ ಘಟನೆಗಳ ಕುರಿತು ಸುದ್ದಿವಾಹಿನಿಗಳ ವರದಿಗಾರಿಕೆಯನ್ನು ಮುಸ್ಲಿಂ ಸಮುದಾಯದ ವಿರುದ್ಧ ಪೂರ್ವಾಗ್ರಹ ಮತ್ತು ಶಂಕೆಯೊಂದಿಗೆ ‘ಹಿಂದುಗಳು ವಿರುದ್ಧ ಮುಸ್ಲಿಮರು ’ಎಂದು ರೂಪಿಸಲಾಗಿತ್ತು ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News