ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪುನಾರಂಭ

Update: 2022-10-10 15:14 GMT

ಬೆಂಗಳೂರು, ಅ. 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಎರಡು ವಾರಗಳಿಂದ ಸ್ಥಗಿತಗೊಳಿಸಿದ್ದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸೋಮವಾರದಂದು ಪುನರಾಂಭಿಸಲಾಗಿದೆ.

ಈ ಪೈಕಿ ಮಹದೇವಪುರ ವಿಭಾಗದಲ್ಲಿ ಆರ್.ನಾರಾಯಣಪುರ, ಶೀಲವಂತನಕೆರೆ, ಕಸವನಹಳ್ಳಿ ಹಾಗೂ ಕೆ.ಆರ್.ಪುರ ವಿಭಾಗದ ಬಸವನಪುರ ವಾರ್ಡ್ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಲಾಯಿತು.

ಮಹದೇವಪುರ ವಿಭಾಗದ ಆರ್.ನಾರಾಯಣಪುರ ಮತ್ತು ವೈಟ್‍ಫೀಲ್ಡ್ ಹತ್ತಿರದ ಶೀಲವಂತನ ಕೆರೆಯ ಬಳಿ ರಾಜಕಾಲುವೆ ಮೇಲೆ ಸುಮಾರು 10 ಮೀಟರ್ ಉದ್ದ ಹಾಗೂ 4 ಮೀಟರ್ ಅಗಲದ ಕವರ್ ಸ್ಲ್ಯಾಬ್ ಅನ್ನು ತೆರವುಗೊಳಿಸಲಾಯಿತು. ಇದರ ಜೊತೆಗೆ 4 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಹಾಗೂ 4 ಶೆಡ್‍ಗಳನ್ನು ತೆರವುಗೊಳಿಸಲಾಯಿತು. ಕಸವನಹಳ್ಳಿಯ ವಲ್ಲಿಯಮ್ಮ ಲೇಔಟ್ ನಲ್ಲಿ ಸುಮಾರು 20 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ ಜಾಗದಲ್ಲಿದ್ದ 3 ಶೆಡ್ ಗಳನ್ನು ತೆರವುಗೊಳಿಸಲಾಯಿತು.

ಕೆ.ಆರ್.ಪುರ ವಿಭಾಗ ಬಸವನಪುರ ವಾರ್ಡ್ ಸನ್ನತಮ್ಮನಹಳ್ಳಿ ಮತ್ತು ದೇವಸಂದ್ರ ಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 100 ಮೀಟರ್ ಉದ್ದದ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಗೋಡೆ ಹಾಗೂ 2 ಮನೆಯ 10 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಹಾಗೂ 1 ಶೆಡ್ ಅನ್ನು ತೆರವುಗೊಳಿಸಲಾಗಿದೆ.

ಒತ್ತುವರಿ ಮಾಡಿ ನಿರ್ಮಿಸಿದ್ದ ಪ್ರಭಾವಿಗಳ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿ ಹಿಂಜರಿಯುತ್ತಿದ್ದು, ಅಸಾಹಕರ ಮೇಲೆ ಬಿಬಿಎಂಪಿ ಮತ್ತೆ ಅಧಿಕಾರವನ್ನು ಚಲಾಯಿಸುತ್ತಿದೆ. ಹಿಂದೆ ಜಲಾವೃತಗೊಂಡಿದ್ದ ರೈನೋ ಲೇಔಟ್‍ನ ವಿಲ್ಲಾಗಳಿಗೆ ನೊಟೀಸ್ ಜಾರಿ ಮಾಡಿದ್ದು, ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News