ಮಂಗಳೂರು: ಅಲೋಶಿಯಸ್ ಬಿ.ಎಡ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ
ಮಂಗಳೂರು ಅ.11: ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ(St Aloysius Institute of Education)ಯ ವಾರ್ಷಿಕ ಕ್ರೀಡಾಕೂಟವು ಶತಮಾನೋತ್ಸವ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಸೈಂಟ್ ಆ್ಯನ್ಸ್ ಕಾಲೇಜ್ ಆಫ್ ಎಜುಕೇಶನ್ ನ ಮಾಜಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸುರೇಶ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಶಿಕ್ಷಣ ಮತ್ತು ಕ್ರೀಡೆಗೆ ಸಮಾನ ಪ್ರಾಮುಖ್ಯತೆ ನೀಡಬೇಕು. ಏಕೆಂದರೆ ಕ್ರೀಡೆ ಮನೋರಂಜನೆ, ವೃತ್ತಿ, ಸ್ಪರ್ಧೆ ಮತ್ತು ಚಿಕಿತ್ಸೆಯಾಗಿಯೂ ಪ್ರಯೋಜನಕಾರಿ. ಕ್ರೀಡಾ ಚಟುವಟಿಕೆಗಳು ದೈಹಿಕ ವ್ಯಾಯಾಮದ ಜೊತೆಗೆ ಮಾನಸಿಕ ನೆಮ್ಮದಿ ಕೂಡಾ ನೀಡುತ್ತದೆ. ಕ್ರೀಡಾ ಚಟುವಟಿಕೆಗಳು ದೈಹಿಕ ಸದೃಢತೆ ಮತ್ತು ಮಾನಸಿಕ ಸ್ಥಿರತೆ ಸಾಧಿಸಲು ಸಹಾಯ ಮಾಡುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ರೆಕ್ಟರ್ ರೆ.ಫಾ.ಮೆಲ್ವಿನ್ ಜೆ.ಪಿಂಟೋ ಎಸ್.ಜೆ. ಮಾತನಾಡಿ, ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರುವ ಶಿಕ್ಷಕರಾಗಬೇಕೆಂದು ಕರೆ ನೀಡಿದರು.
ಇದೇಸಂದರ್ಭ ಕ್ರೀಡಾಕೂಟದ ಪೂರ್ವಭಾವಿಯಾಗಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಮುಖ್ಯ ಅತಿಥಿಗಳು ಪದಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.
ನಿರ್ದೇಶಕ ಫಾದರ್ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ., ಮಾತನಾಡಿ ಶುಭ ಹಾರೈಸಿದರು. ಪ್ರಾಂಶುಲಾಲೆ ಡಾ.ಫರಿತಾ ವಿಗಾಸ್ ಸ್ವಾಗತಿಸಿದರು.
ಸಂಚಾಲಕ ಸಂತೋಷ್ ಫುರ್ಟಾಡೊ ಕ್ರೀಡಾಕೂಟದ ವಿಜೇತರ ಹೆಸರನ್ನು ಪ್ರಕಟಿಸಿದರು. ಕ್ರೀಡಾ ಕಾರ್ಯದರ್ಶಿ ಹರೀಶ್ ಕುಮಾರ್ ವಂದಿಸಿದರು. ನಮಿತಾ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.