ಮಂಗಳೂರು: ಹುಲಿವೇಷಧಾರಿಯ ಕೊಲೆ ಪ್ರಕರಣ; ಆರೋಪಿ ರಾಜೇಶ್ ಪೂಜಾರಿಗೆ ನ್ಯಾಯಾಂಗ ಬಂಧನ
ಮಂಗಳೂರು, ಅ.12: ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಹರಿಪದವು ಎಂಬಲ್ಲಿ ಹುಲಿವೇಷಧಾರಿ ಜಯಾನಂದ ಆಚಾರ್ಯ (65) ಎಂಬವರನ್ನು ಕೊಲೆಗೈದ ಆರೋಪಿ ಕುಂಜತ್ ಬೈಲ್ ದೇವಿನಗರದ ರಾಜೇಶ್ ಪೂಜಾರಿ (31)ಗೆ ನ್ಯಾಯಾಂಗ ಬಂಧನವಾಗಿದೆ.
ಹುಲಿವೇಷಧಾರಿಯಾಗಿದ್ದ ಜಯಾನಂದ ಆಚಾರ್ಯರ ಮೃತದೇಹವು ಕುತ್ತಿಗೆಗೆ ದಾರ ಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿತ್ತು. ಈ ಬಗ್ಗೆ ಜಯಾನಂದರ ಸಹೋದರ ಅಚ್ಚುತ ಆಚಾರ್ಯ ಎಂಬವರು ಕೊಲೆ ಶಂಕೆ ವ್ಯಕ್ತಪಡಿಸಿ ಕಾವೂರು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿದ್ದ ಕಾವೂರು ಪೊಲೀಸರು ತನಿಖೆ ನಡೆಸಿದಾಗ ಆರೋಪಿ ರಾಜೇಶ್ ಪೂಜಾರಿ ಕೊಲೆ ನಡೆಸಿರುವುದು ಬಹಿರಂಗಗೊಂಡಿತು. ಅದರಂತೆ ಆರೋಪಿ ರಾಜೇಶ್ ಪೂಜಾರಿಯನ್ನು ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಜಯಾನಂದ ಆಚಾರ್ಯರ ಮೃತದೇಹವು ಹರಿಪದವು ಸಮೀಪದ ಕಿಯೋನಿಕ್ಸ್‌ಗೆ ಸಂಬಂಧಪಟ್ಟ ಖಾಲಿ ಜಾಗದಲ್ಲಿ ಪತ್ತೆಯಾಗಿತ್ತು. ನವರಾತ್ರಿಯ ಸಂದರ್ಭ ಜಯಾನಂದ ಹೆಣ್ಣು ಮಕ್ಕಳ ವೇಷ ಧರಿಸುವ ಪರಿಪಾಠ ಬೆಳೆಸಿಕೊಂಡಿದ್ದು, ವಿಪರಿತವಾದ ಆಮಲು ಪದಾರ್ಥವನ್ನೂ ಸೇವಿಸುವ ಚಟವನ್ನು ಹೊಂದಿದ್ದವರಾಗಿದ್ದರು ಎಂದು ತಿಳಿದುಬಂದಿದೆ.
ಕೊಲೆಯಾದ ಜಯಾನಂದ ಮತ್ತು ಕೊಲೆಗೈದ ರಾಜೇಶ್ ಪೂಜಾರಿಯು ಸಲಿಂಗ ಕಾಮಿಗಳಾಗಿದ್ದು, 300 ರೂ. ವಿಚಾರದಲ್ಲಿ ಇಬ್ಬರ ಮಧ್ಯೆ ತಕರಾರು ನಡೆದಿದೆ. ಅ.7ರ ಪೂ.11ರಿಂದ 8ರ ಮಧ್ಯಾಹ್ನ 12ರ ಮಧ್ಯೆ ಆರೋಪಿ ರಾಜೇಶ್ ಪೂಜಾರಿಯು ಜಯಾನಂದರನ್ನು ಕುತ್ತಿಗೆಗೆ ಪ್ಲಾಸ್ಟಿಕ್ ಕೆಂಪುದಾರದಿಂದ ಬಿಗಿದು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.