ರಾಮನವಮಿ ಗಲಭೆ: 2.9 ಲಕ್ಷ ರೂ. ಪಾವತಿಸಲು 12 ವರ್ಷದ ಬಾಲಕನಿಗೆ ಸೂಚನೆ!

Update: 2022-10-19 04:56 GMT

ಭೋಪಾಲ್: ಮಧ್ಯಪ್ರದೇಶದ ಖರ್ಗೋನ್‍ನಲ್ಲಿ ರಾಮನವಮಿ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಆದ ಹಾನಿಗೆ ಪರಿಹಾರವಾಗಿ 2.9 ಲಕ್ಷ ರೂಪಾಯಿ ಪಾವತಿಸುವಂತೆ 12 ವರ್ಷದ ಬಾಲಕನೊಬ್ಬನಿಗೆ ನೋಟಿಸ್ ನೀಡಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕನನ್ನು ಬಂಧಿಸುವ ಭೀತಿ ಇದ್ದು, ಈ ಬಗ್ಗೆ ತಮಗೆ ಆಘಾತವಾಗಿದೆ ಎಂದು ಬಾಲಕನ ತಾಯಿ ಹೇಳಿದ್ದಾರೆ. ಈ ಬಾಲಕನ ತಂದೆ ಹಾಗೂ ಕೂಲಿ ಕೆಲಸಗಾರ ಕಾಲೂ ಖಾನ್‍ಗೆ 4.8 ಲಕ್ಷ ರೂಪಾಯಿ ನಷ್ಟ ಪರಿಹಾರ ತುಂಬುವಂತೆ ರಾಜ್ಯ ಕ್ಲೇಮ್ ನ್ಯಾಯಾಧಿಕರಣ ಸೂಚಿಸಿದೆ. ಈ ಕುಟುಂಬದ ನೆರೆಯವರು ಹೊಸ ಕಾನೂನಿನ ಅನ್ವಯ ಪರಿಹಾರಕ್ಕೆ ಆಗ್ರಹಿಸಿದ್ದರು.

ಮಧ್ಯಪ್ರದೇಶದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ತಡೆ ಮತ್ತು ವಸೂಲಾತಿ ತಡೆ ಕಾಯ್ದೆಯನ್ನು ಕಳೆದ ವರ್ಷದ ಡಿಸೆಂಬರ್ ನಲ್ಲಿ ಆಂಗೀಕರಿಸಲಾಗಿತ್ತು. ಬಿಜೆಪಿ ಆಡಳಿತದ ಮತ್ತೊಂದು ರಾಜ್ಯವಾದ ಉತ್ತರ ಪ್ರದೇಶವನ್ನು ಅನುಸರಿಸಿ ಮಧ್ಯಪ್ರದೇಶ ಈ ಕಾಯ್ದೆ ಜಾರಿಗೆ ತಂದಿತ್ತು. ಯಾವುದೇ ಮುಷ್ಕರಗಳು, ಪ್ರತಿಭಟನೆಗಳು ಅಥವಾ ಗುಂಪು ಘರ್ಷಣೆ ವೇಳೆ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದು ಸಾಬೀತಾದಲ್ಲಿ ಪರಿಹಾರ ವಸೂಲಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಉತ್ತರ ಪ್ರದೇಶದಲ್ಲಿ ಈ ಕಾನೂನನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಮನವಮಿ ಬಳಿಕ ನ್ಯಾಯಾಧೀಕರಣಕ್ಕೆ 343 ದೂರುಗಳು ಬಂದಿದ್ದವು. ಈ ಪೈಕಿ ಕೇವಲ 34 ಮಾತ್ರ ಸ್ವೀಕೃತವಾಗಿದ್ದವು. ಹಿಂದೂಗಳು ಸಲ್ಲಿಸಿದ ನಾಲ್ಕು ಹಾಗೂ ಮುಸ್ಲಿಮರು ಸಲ್ಲಿಸಿದ ಎರಡು ಕ್ಲೇಮ್‍ಗಳನ್ನು ಮಾತ್ರ ಇದುವರೆಗೆ ಇತ್ಯರ್ಥಪಡಿಸಲಾಗಿದೆ. 50 ಮಂದಿಯಿಂದ ಒಟ್ಟು 7.46 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News