ಬೆಂಗಳೂರು: ವಕ್ಫ್ ಮಂಡಳಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರಾಜ್ಯ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಅವರು ರಾಷ್ಟ್ರಧ್ವಜಾರೋಹಣ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಆಡಳಿತದಲ್ಲಿ ಕನ್ನಡ ಭಾಷೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲ ಇಲಾಖೆಗಳು ಪ್ರಯತ್ನಿಸಬೇಕು. ಇದರಿಂದ ತಳಮಟ್ಟದವರೆಗೂ ಸರಕಾರದ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪಲು ನೆರವಾಗಲಿದೆ ಎಂದು ಹೇಳಿದರು. ವಿವಿಧ ಸಂಸ್ಥಾನಗಳಲ್ಲಿ ಹರಿದು ಹಂಚಾಗಿದ್ದ ಕನ್ನಡದ ನೆಲವನ್ನು ಒಗ್ಗೂಡಿಸಿ ಕರ್ನಾಟಕವನ್ನು ಒಂದುಗೂಡಿಸಲು ನಮ್ಮ ಹಿರಿಯರು ಅಪಾರ ಶ್ರಮಪಟ್ಟಿದ್ದಾರೆ' ಎಂದರು.
''ವಕ್ಫ್ ಮಂಡಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಶ್ಲಾಘನೀಯ. ಕನ್ನಡ ಭಾಷಾ ಜ್ಞಾನದಿಂದ ಮುಸ್ಲಿಮರ ಪ್ರಗತಿ ಇನ್ನಷ್ಟು ಏಳಿಗೆಯಾಗಲಿದೆ. ಕರಾವಳಿ ಕರ್ನಾಟಕದ ಮುಸ್ಲಿಮರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಏಳಿಗೆಯಾಗಲು ಅವರ ಕನ್ನಡ ಭಾಷಾ ಜ್ಞಾನವೇ ಪ್ರಮುಖ ಕಾರಣವಾಗಿದೆ'' ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಕ್ಫ್ ಮಂಡಳಿ ಸದಸ್ಯ ಆರ್. ಅಬ್ದುಲ್ ರಿಯಾಝ್ ಖಾನ್ ವಹಿಸಿದ್ದರು. ವಕ್ಫ್ ಮಂಡಳಿ ಸದಸ್ಯ ಆಸಿಫ್ ಅಲಿ ಶೇಖ್, ನ್ಯಾಯವಾದಿ ಭೂಸನೂರು ಮಠ, ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಖಾನ್ ಪರ್ವೇಝ್ ಉಪಸ್ಥಿತರಿದ್ದರು.
ವಕ್ಫ್ ಮಂಡಳಿ ಎಸಿಇಓ ಬಿ.ಎ. ಖಾದರ್ ಶಾ ವಂದಿಸಿದರು. ಸದ್ರುದೀನ್ ಸ್ವಾಗತಿಸಿ, ಇರ್ಷಾದ್ ನಿರೂಪಿಸಿದರು.
ವಕ್ಫ್ ಮಂಡಳಿ ಸಿಬ್ಬಂಧಿಗಳು ನಾಡಗೀತೆ ಹಾಡಿದರು.